ಪರುಷ ಕಟ್ಟೆ ಅಭಿವೃದ್ಧಿಗೆ ರು.೨ ಕೋಟಿ

oplus_1179648
ಬಸವಕಲ್ಯಾಣದಲ್ಲಿ ಶುಕ್ರವಾರ ಕರೆದಿದ್ದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಶಾಸಕ ಶರಣು ಸಲಗರ ಮಾತನಾಡಿದರು. ಎಂಎಲ್‌ಸಿ ಎಂ.ಜಿ.ಮುಳೆ, ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಾಲಾ ನಾರಾಯಣರಾವ, ಡಾ.ದತ್ತಾತ್ರೇಯ ಗಾದಾ, ಶಿವಾನಂದ ಮೇತ್ರೆ, ರಮೇಶ ಸುಲ್ಫಿ, ಮಹಾದೇವ ಜಮ್ಮು ಇದ್ದರು.
Published on

ಬಸವಕಲ್ಯಾಣ: ನಗರದಲ್ಲಿ ಐತಿಹಾಸಿಕ ಪವಿತ್ರ ಪರುಷ ಕಟ್ಟೆ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅನುದಾನದಲ್ಲಿ ಎರಡು ಕೋಟಿ ರೂ. ನೀಡುವುದಾಗಿ ಶಾಸಕ ಶರಣು ಸಲಗರ ಭರವಸೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಈ ಅನುದಾನದಲ್ಲಿ ಮಾಡಬೇಕಾದ ಕಾಮಗಾರಿ ಕುರಿತು ಸಂಬಂಧಿತರು ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಪರುಷ ಕಟ್ಟೆ ಜೀರ್ಣೋದ್ಧಾರ ಕೆಲಸ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿತ್ತು. ಇದೀಗ ನೆನೆಗುದಿಗೆ ಬಿದ್ದಿದ್ದು, ಪೂರ್ಣಗೊಳಿಸಲು ೨೫ ಕೋಟಿ ಅನುದಾನ ಮಂಜೂರಿಗಾಗಿ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸುವುದಾಗಿ ತಿಳಿಸಿದರು.

ಮರ‍್ನಾಲ್ಕು ದಿನ ಮಳೆ ಮುನ್ಸೂಚನೆ ಇದ್ದು, ಜೂ.೧೭ರವರೆಗೆ ರೈತರು ಬಿತ್ತನೆ ಮಾಡಬಾರದು ಎಂದು ಮನವಿ ಮಾಡಿದ ಸಲಗರ, ರೈತರಿಗೆ ನೀಡುವ ತಾಡಪತ್ರಿ ಸೇರಿ ಅಗತ್ಯ ಕೃಷಿ ಸಾಮಗ್ರಿ ಗುಣಮಟ್ಟದಿಂದ ಕೂಡಿರಬೇಕು. ಪರಿಶೀಲನೆ ಮಾಡಿದ ಬಳಿಕವೇ ವಿತರಿಸಬೇಕು ಎಂದು ತಾಕೀತು ಮಾಡಿದರು.

ಇಲಾಖೆಯ ವರದಿ ಒಪ್ಪಿಸಿದ ಸಹಾಯಕ ಕೃಷಿ ನಿರ್ದೇಶಕ ಗೌತಮ, ಮುಂಗಾರಿನಲ್ಲಿ ೯೬ ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ ೪೪ ಸಾವಿರ ಹೆಕ್ಟೇರ್ ಸೋಯಾಬೀನ್ ಬಿತ್ತಲಾಗುತ್ತಿದೆ. ಬೀಜ-ರಸಗೊಬ್ಬರದ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

ಬೇಲೂರಿನಲ್ಲಿ ಬೀಜ ಸಮರ್ಪಕ ವಿತರಣೆ ಆಗುತ್ತಿಲ್ಲ ಎಂದು ರೈತರು ದೂರಿದ್ದಾರೆ. ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ ಸೂಚಿಸಿದರು.

ರೈತರ ಬೇಡಿಕೆಗೆ ಅನುಗುಣ ತಾಡಪತ್ರಿ ನೀಡಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ ಸಲಹೆ ನೀಡಿದರು. ಗುಣಮಟ್ಟದ ತಾಡಪತ್ರಿ ಬರುತ್ತಿಲ್ಲ. ಪರಿಶೀಲಿಸಿ ಎಂದು ಹುಲಸೂರು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿದ್ರಾಮ ಕಾಮಣ್ಣ ಹೇಳಿದರು.

ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇರುವ ಕಡೆ ಅತಿಥಿ ಶಿಕ್ಷಕರ ನೇಮಕ ಮಾಡಿ. ಇದಕ್ಕೆ ಕೆಕೆಆರ್‌ಡಿಬಿಯಿಂದ ಅನುದಾನ ಕಲ್ಪಿಸಲಾಗುವುದು. ವಾರಕ್ಕೊಮ್ಮೆ ಒಂದು ಶಾಲೆಯಲ್ಲಿ ನಾನೇ ಒಂದು ಕ್ಲಾಸ್ ತೆಗೆದುಕೊಳ್ಳುತ್ತೇನೆ. ತಾವು ಸಹ ಒಂದು ಕ್ಲಾಸ್ ತೆಗೆದುಕೊಳ್ಳಬೆಕು ಎಂದು ಶಾಸಕ ಸಲಗರ ಅಧಿಕಾರಿಗಳಿಗೆ ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಮಾತನಾಡಿದರು. ತಹಸೀಲ್ದಾರ್‌ರಾದ ಡಾ.ದತ್ತಾತ್ರೇಯ ಗಾದಾ, ಶಿವಾನಂದ ಮೇತ್ರೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ರಮೇಶ ಸುಲ್ಫಿ, ಮಹಾದೇವ ಜಮ್ಮು ಇತರರಿದ್ದರು.

ಸಭೆಯಿಂದ ಹೊರನಡೆದ ಮುಳೆ: ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕೆಂಬ ಉದ್ದೇಶದಿಂದ ಬಸವಕಲ್ಯಾಣ ನೋಡಲ್ ತಾಲೂಕು ಆಗಿ ಆಯ್ಕೆ ಮಾಡಿಕೊಡಿದ್ದೇನೆ. ಆದರೆ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ನನಗೆ ಮಾಹಿತಿ ನೀಡುತ್ತಿಲ್ಲ. ಕಾರ್ಯಕ್ರಮಗಳಿಗೂ ಆಹ್ವಾನಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಅಸಮಾಧಾನ ವ್ಯಕ್ತಪಡಿಸಿದರು. ನಾನು ಇದುವರೆಗೆ ಯಾವೊಬ್ಬ ಅಧಿಕಾರಿ ವಿರುದ್ಧವೂ ದೂರು ನೀಡಿಲ್ಲ. ವರ್ಗಾವಣೆ ಮಾಡಿಸಲು ಸಹ ಹೋಗಿಲ್ಲ. ಆದರೆ ನನಗೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ನನ್ನನ್ನು ಎಂಎಲ್‌ಸಿ ಮಾಡಿದವರ ಗಮನಕ್ಕೆ ತಂದು ನೋಡಲ್ ತಾಲೂಕು ಬದಲಾಯಿಸಲು ಯೋಚಿಸುತ್ತಿರುವುದಾಗಿ ಹೇಳಿ ಸಭೆಯಿಂದ ಹೊರನಡೆದರು.

ಆರೋಪ ಮಾಡುವವರು ನೇರ ಚರ್ಚೆಗೆ ಬರಲಿ: ಗುತ್ತಿ ಸಮೀಪ ೫೦ ವರ್ಷ ಹಿಂದೆ ನಿರ್ಮಿಸಿದ್ದ ಸೇತುವೆ ಇತ್ತೀಚೆಗೆ ಮಳೆಯಿಂದ ಕೊಚ್ಚಿ ಹೋಗಿದೆ. ಈ ವಿಷಯದಲ್ಲಿ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಎಲ್ಲದಕ್ಕೂ ಆರೋಪ ಮಾಡುವ ಬದಲು ನೇರ ಚರ್ಚೆಗೆ ಬನ್ನಿ ಎಂದು ಶಾಸಕ ಶರಣು ಸಲಗರ ಆಹ್ವಾನ ನೀಡಿದರು. ತಾಲೂಕಿನಲ್ಲಿ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ಒಳ್ಳೆಯ ಕೆಲಸ ಮಾಡಲಿ ಎಂಬುದು ನನ್ನ ಆಶಯ. ಎಸ್‌ಎಚ್‌ಡಿಪಿ ಯೋಜನೆಯಡಿ ಭೋಸಗಾ-ಆಲಗೂಡ ರಸ್ತೆ ಕಾಮಗಾರಿ ಮುಗಿದು ಮೂರು ತಿಂಗಳಾಗಿದೆ. ಆದರೆ ಈ ಯೋಜನೆಯಡಿ ಬೇರೆ ತಾಲೂಕಿನಲ್ಲಿ ಕೆಲಸವೇ ಆರಂಭವಾಗಿಲ್ಲ ಎಂದು ಹೇಳಿದರು.

ನಗರದ ರಸ್ತೆ ಗುಂಡಿಗಳನ್ನು ಮುಚ್ಚಿ: ಬಸವಕಲ್ಯಾಣ ನಗರದ ಪ್ರಮುಖ ರಸ್ತೆಗಳಲ್ಲಿ ಬದ್ದಿರುವ ತಗ್ಗು ಗುಂಡಿಗಳಿಂದಾಗಿ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಆದಷ್ಟು ಬೇಗ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಲಗರ ಸೂಚಿಸಿದರು. ನಗರದಲ್ಲಿ ಕೆಟ್ಟಿರುವ ಕಡೆ ರಸ್ತೆ ದುರಸ್ತಿ ಜತೆಗೆ ಗುಂಡಿಗಳನ್ನು ಮುಚ್ಚಲು ಅಂದಾಜು ೨೫ ಲಕ್ಷ ವೆಚ್ಚದ ಕ್ರಿಯಾಯೊಜನೆ ಸಿದ್ಧಪಡಿಸಿ ಪ್ರಸ್ತಾವನೆ ಕಳಿಸಲಾಗಿದೆ. ಟೆಂಡರ್ ಕರೆದ ನಂತರ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳುವುದಾಗಿ ನಗರಸಭೆ ಪೌರಾಯುಕ್ತ ರಾಜು ಬಣಕಾರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net