

ಚಿತ್ರದುರ್ಗ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಹಿರಿಯೂರು ಕಾಲೇಜಿನಲ್ಲಿ ಎಂಇವಿ ಟ್ರೇಡ್ 19, ಎಡಿವಿ, ಸಿಎನ್‌ಸಿ ಟ್ರೇಡ್ 06 ಸಂಬಂಧ 2022-2024ನೇ ಸಾಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ವಂಚಿಸಿದ್ದು, ಕ್ರಮಕ್ಕೆ ಮತ್ತು ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಹತ್ತಾರು ವಿದ್ಯಾರ್ಥಿಗಳು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.
25 ವಿದ್ಯಾರ್ಥಿಗಳು ಸಂಸ್ಥೆಯ ನಿಯಮಾನುಸಾರ 2 ವರ್ಷ ಸಂಪೂರ್ಣ ತರಬೇತಿ ಪಡೆದಿದ್ದು, ಸಂಸ್ಥೆ ನಡೆಸುವ ಪರೀಕ್ಷೆಗಳಿಗೆ ಹಾಜರಾಗಲು ಅರ್ಹರಿದ್ದಾರೆ. ಆದರೆ, ಮೊದಲ ವರ್ಷದ ಪರೀಕ್ಷಾ ಶುಲ್ಕ ಪಾವತಿಸಕೊಳ್ಳಲು ನಿರಾಕರಿಸಿ, ನಡೆಸದೆಯೇ ಲೋಪ ಎಸಗಿದೆ ಎಂದು ದೂರಿದರು.
ಈ ಸಂಬಂಧ ವಿದ್ಯಾರ್ಥಿಗಳು, ಪಾಲಕರು ಸಂಸ್ಥೆಯ ಪ್ರಾಚಾರ್ಯ, ಜೆಟಿಒ, ಟಿಒ ಬಳಿ ವಿಚಾರಿಸಿದಾಗ ಯಾವುದೇ ಪೂರ್ಣ ಮಾಹಿತಿ ನೀಡದೆ, ಪರೀಕ್ಷೆ ನಡೆಸುವ ಆಶ್ವಾಸನೆ ನೀಡುತ್ತ ಬಂದಿದ್ದಾರೆ. ಆಗಸ್ಟ್ನಿಂದ ಪರೀಕ್ಷೆ ಆರಂಭವಾಗಲಿದ್ದು, 25 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರುಪಡಿಸುವ ಯಾವುದೇ ಭರವಸೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಆದರೆ, ನಮಗೆ ಅರಿವಿಲ್ಲದೆ ರೋಬೋಟಿಕ್ಸ್ ಟ್ರೇಡ್‌ಗೆ (ಒಂದು ವರ್ಷದ ತರಬೇತಿ) ನಮ್ಮನ್ನು ಸೇರಿಸಿ ಪರೀಕ್ಷೆ ಬರೆಯಲು ಒತ್ತಾಯಿಸುತ್ತಿದ್ದಾರೆ. ನಾವೂ ತರಬೇತಿ ಪಡೆದಿದ್ದಕ್ಕೂ ಇದಕ್ಕೂ ಸಂಬಂಧವಿಲ್ಲ. ಬೆಂಗಳೂರಿನ ಉತ್ತಮ ಕಂಪನಿಯಲ್ಲಿ ಉದ್ಯೋಗ ಕೊಡಿಸುವ ಆಮಿಷ ತೋರಿಸುತ್ತಿದ್ದಾರೆ. ಐಟಿಐ ಕಮಿಷನರ್ ಗಮನಕ್ಕೆ ತರದೆ, ಅವ್ಯವಹಾರ ಮುಚ್ಚಿಹಾಕಲು ಯತ್ನಿಸುತ್ತಿದ್ದು, ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಕೋರಿದರು.
ವಿದ್ಯಾರ್ಥಿಗಳಾದ ಎಸ್.ಆರ್.ನಾಗರಾಜ್, ಎಚ್.ಟಿ.ಪ್ರಜ್ವಲ್ ಯಾದವ್, ಸೆಯಾನ್, ಎಂ.ಎಚ್.ನರಸಿಂಹಮೂರ್ತಿ, ಬಾಬಾಜಾನ್, ಎ.ಟಿ.ಕೃತಿಕ್ ಇತರರಿದ್ದರು.