ಪರೀಕ್ಷೆ ಕುರಿತ ಸುಳ್ಳುಸುದ್ದಿಗೆ ಕಿವಿಗೊಡಬೇಡಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಿದ್ಧತಾ ಸಭೆ

SSLC Meeting
Published on

ಬೆಂಗಳೂರು ಗ್ರಾಮಾಂತರ: ಮಾ.28ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಹಾಗೂ ಧೈರ್ಯವಾಗಿ ಪರೀಕ್ಷೆ ಎದುರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲ ಕ್ರಮಕೈಗೊಳ್ಳಬೇಕು ಹಾಗೂ ಪರೀಕ್ಷೆ ಕುರಿತು ಸುಳ್ಳುಸುದ್ದಿ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.

ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲಿ ಸೋಮವಾರ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಏ.11 ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆ ಶಾಂತಿಯುತವಾಗಿ ನಡೆಯಲು ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸುವ ಜತೆಗೆ, ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಪರೀಕ್ಷೆ ಬರೆಯುವ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿರಬೇಕು ಎಂದು ತಿಳಿಸಿದರು.

ವಿದ್ಯಾರ್ಥಿ ಸ್ನೇಹಿ: ಪ್ರತಿ ವಿಷಯಗಳ ಪರೀಕ್ಷೆಗಳಿಗೂ 2 ರಿಂದ 3 ದಿನಗಳ ಅಂತರವಿದ್ದು, ಪರೀಕ್ಷಾ ವೇಳಾಪಟ್ಟಿಯೂ ವಿದ್ಯಾರ್ಥಿ ಸ್ನೇಹಿಯಾಗಿದೆ. ಪ್ರತಿದಿನ ಬೆಳಗ್ಗೆ 10.15ಕ್ಕೆ ಮೊದಲ ಬೆಲ್ ಆಗಲಿದ್ದು, ವಿದ್ಯಾರ್ಥಿಗಳು 10.45 ಒಳಗೆ ಪರಿಕ್ಷಾ ಕೇಂದ್ರಕ್ಕೆ ಬರಲು ಅವಕಾಶವಿದೆ, ಪರೀಕ್ಷಾ ಕೇಂದ್ರಕ್ಕೆ ಸಿಬ್ಬಂದಿ ಅಥವಾ ವಿದ್ಯಾರ್ಥಿಗಳು ಯಾರೂ ಮೊಬೈಲ್, ಕ್ಯಾಮರಾ, ಡಿಜಿಟಲ್ ಗಡಿಯಾರ ತರುವಂತಿಲ್ಲ ಎಂದು ಡಿಸಿ ತಿಳಿಸಿದರು. ಪ್ರತಿ ಕೊಠಡಿಗೆ 20 ವಿದ್ಯಾರ್ಥಿಗಳಂತೆ ಕೊಠಡಿ ನಿಗದಿಗೊಳಿಸಬೇಕು. ಕೇಂದ್ರಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸಿರಬೇಕು ಎಂದು ತಿಳಿಸಿದರು.

ಗುರುತಿನ ಚೀಟಿ ಕಡ್ಡಾಯ: ಪರೀಕ್ಷಾ ಕಾರ್ಯನಿರತರೆಲ್ಲರೂ ಕಡ್ಡಾಯವಾಗಿ ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ ಧರಿಸಬೇಕು ಹಾಗೂ ಅನಧಿಕೃತ ವ್ಯಕ್ತಿಗಳು ಒಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಈ.ರವಿಕುಮಾರ್ ತಿಳಿಸಿದರು.

13,872 ವಿದ್ಯಾರ್ಥಿಗಳ ನೋಂದಣಿ: ಜಿಲ್ಲೆಯಲ್ಲಿ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ 13,872 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 534 ವಿದ್ಯಾರ್ಥಿಗಳು ಖಾಸಗಿ ಅಭ್ಯರ್ಥಿಗಳಾಗಿದ್ದಾರೆ. ಜಿಲ್ಲೆಯಾದ್ಯಂತ 58 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಪೈಕಿ ದೇವನಹಳ್ಳಿಯಲ್ಲಿ 2 ಪರೀಕ್ಷಾ ಕೇಂದ್ರಗಳನ್ನು ಖಾಸಗಿ ಅಭ್ಯರ್ಥಿಗಳಿಗಾಗಿ ತೆರೆಯಲಾಗಿದೆ.

ದೂರದ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ತೋರಿಸಿ ಉಚಿತ ಪ್ರಯಾಣ ಮಾಡಲು ಅವಕಾಶ ನೀಡುವಂತೆ ಮತ್ತು ದಿನನಿತ್ಯದ ಮಾರ್ಗ ಇಲ್ಲದ ಕಡೆಗಳಲ್ಲಿ ಮಕ್ಕಳಿಗಾಗಿಯೇ ಪರೀಕ್ಷಾ ವಿಶೇಷ ಬಸ್ ಒದಗಿಸಲು ದೊಡ್ಡಬಳ್ಳಾಪುರ ಮತ್ತು ಇತರ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ಗಳು ಸಿದ್ಧತೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net