

ಚಾಮರಾಜನಗರ: ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳ ಮೇಲೆ ವೆಬ್ ಕ್ಯಾಸ್ಟಿಂಗ್ ಕಣ್ಗಾವಲಿನಲ್ಲಿ ನಡೆಯಲಿವೆ.
ಮಾ.21ರಿಂದ ಏ.4ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಮತ್ತು ಮಾ.1ರಿಂದ ಮಾ.20ವರೆಗೆ ಪಿಯುಸಿ ಪರಿಕ್ಷೆ-1 ಗಳು ನಡೆಯಲಿವೆ. 12432 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ, 7364 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 47 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ 17 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಇವುಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ವೆಬ್ ಕ್ಯಾಸ್ಟಿಂಗ್ ಕಣ್ಗಾವಲು ಇರಿಸಲಾಗುತ್ತಿದೆ.
ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್: ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್‌ಗೆ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲಾ ಪಂಚಾಯಿತಿ ಕೊಠಡಿ-3ರಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿಯನ್ನು ಸ್ಥಾಪನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ವೆಬ್ ಕ್ಯಾಸ್ಟಿಂಗ್ ಮೂಲಕ ಸಿಬ್ಬಂದಿ ಪರಿಶೀಲನೆ ಮಾಡುತ್ತಾರೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಚಲನ-ವಲನವನ್ನು ಗಮನಿಸಲಾಗುತ್ತದೆ. ಪ್ರಸ್ತುತ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಪ್ರಾಯೋಗಿಕವಾಗಿ ಈ ಪರೀಕ್ಷೆಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲೆಯ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳ ಮೇಲೆ ಬೆಂಗಳೂರಿನ ಕೇಂದ್ರ ಕಚೇರಿಯಿಂದಲೂ ನಿಗಾ ವಹಿಸಲಾಗುತ್ತದೆ. ನಕಲು ಮಾಡುವುದು ಕಂಡುಬಂದರೆ ಜಿಲ್ಲೆಯಲ್ಲಿ ಸಿಸಿಟಿವಿ ಕ್ಯಾಮರಾ ನಿಗಾವಹಿಸಿರುವ ಅಧಿಕಾರಿಗಳಿಗೆ ಅಲರ್ಟ್ ಮಾಡಲಾಗುತ್ತದೆ. ಇದನ್ನು ಅಧಿಕಾರಿಗಳು ಪರಿಶೀಲಿಸಿ ಕ್ರಮವಹಿಸುತ್ತಾರೆ. ಕ್ಯಾಮರಾಗಳು ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಪೋಟೋ ಮತ್ತು ವಿಡಿಯೋ ತುಣುಕುಗಳನ್ನು ಕ್ಷಣಾರ್ಧದಲ್ಲೇ ರವಾನೆ ಮಾಡುತ್ತವೆ. ಇದರಿಂದ ಅಕ್ರಮಗಳನ್ನು ತಡೆಗಟ್ಟಲು ನೆರವಾಗಲಿದೆ. ಇದಕ್ಕಾಗಿಯೇ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗಗಳು ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಂಡಿದ್ದಾರೆ. ಈ ಅಧಿಕಾರಿಗಳು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕೆಲಸ ಮಾಡಲಿದ್ದಾರೆ.
ಲಾಟರಿ ಮೂಲಕ ಕೊಠಡಿ ಆಯ್ಕೆ: ಪರೀಕ್ಷಾ ಕೇಂದ್ರಗಳಿಗೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಕೊಠಡಿಗಳನ್ನು ಲಾಟರಿ ಪ್ರಕ್ರಿಯೆ ಮೂಲಕ ನೀಡಲಾಗುತ್ತದೆ. ಪರೀಕ್ಷಾ ಕಾರ್ಯಕ್ಕೆ ಆ ದಿನದ ಪರೀಕ್ಷಾ ವಿಷಯವನ್ನು ಹೊರತುಪಡಿಸಿದ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಲಾಗುತ್ತದೆ. ಯಾವ ಕೊಠಡಿಗೆ ಯಾವ ಶಿಕ್ಷಕರನ್ನು ನೇಮಿಸಬೇಕೆಂಬುದು ಮೇಲಧಿಕಾರಿಗಳ ವೈಯಕ್ತಿಕ ತೀರ್ಮಾನವಾಗಿರುವುದಿಲ್ಲ. ಬದಲಾಗಿ ಶಿಕ್ಷಕರ ಹೆಸರನ್ನು ಬರೆದು ಲಾಟರಿ ಪ್ರಕ್ರಿಯೆಯಂತೆ ಆಯ್ಕೆ ಮಾಡಿ ಕೊಠಡಿಗೆ ನಿಯೋಜನೆ ಮಾಡಲಾಗುತ್ತದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಲಿವೆ. ವೆಬ್ ಕ್ಯಾಸ್ಟಿಂಗ್ ಮೂಲಕ ಮಾನಿಟರ್ ಮಾಡಲಾಗುತ್ತದೆ. ಇದು ಉತ್ತಮ ಪರೀಕ್ಷಾ ಅಭ್ಯಾಸವನ್ನು ಕಲಿಸುತ್ತದೆ. ಓದುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದಿಲ್ಲ. ರಾಮಚಂದ್ರರಾಜೇ ಅರಸ್, ಉಪ ನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ(ಪ್ರೌಢಶಾಲೆ ವಿಭಾಗ) ಪಾದರ್ಶಕವಾಗಿ ಪರೀಕ್ಷೆ ನಡೆಸಲು ಸಿಸಿಟಿವಿ ಕ್ಯಾಮರಾ ಕಣ್ಗಾವಲು ಮುಖ್ಯ. ಅಕ್ರಮ ಚಟುವಟಿಕೆಗಳನ್ನು ತಡೆಯಲು ನೆರವಾಗಲಿದೆ. ವೆಬ್ ಕ್ಯಾಸ್ಟಿಂಗ್ ಮೂಲಕ ಪ್ರತಿ ಕೊಠಡಿಗಳನ್ನೂ ಸಹ ಮೇಲ್ವಿಚಾರಣೆ ಮಾಡಲಾಗುತ್ತದೆ. ಮಂಜುನಾಥ್ ಪ್ರಸನ್ನ, ಉಪ ನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ ವಿಭಾಗ)