ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

17ang1
Published on

ಅಣ್ಣಿಗೇರಿ: ಪರಿಹಾರ ವಿತರಣೆಗೆ ಆಗ್ರಹಿಸಿ ಸೀಲ್​ಡೌನ್ ಆದ ಪಟ್ಟಣದ ಹಳೇ ಅಮೃತೇಶ್ವರ ನಗರ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಹಳೇ ಅಮೃತೇಶ್ವರ ನಗರದಲ್ಲಿ ಜೂ. 10ರಂದು ಸಿಆರ್​ಪಿಎಫ್ ಯೋಧನೊಬ್ಬನಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೀಲ್​ಡೌನ್ ಮಾಡಿತು. ಇಲ್ಲಿನ 240 ಕುಟುಂಬಗಳ ಪೈಕಿ 150ಕ್ಕೂ ಹೆಚ್ಚು ಕುಟುಂಬಗಳು ದಿನಗೂಲಿ ಕೆಲಸವನ್ನೇ ಅವಲಂಬಿಸಿವೆ. ಲಾಕ್​ಡೌನ್ ಸಮಯದಲ್ಲಿ ಅಲ್ಪಸ್ವಲ್ಪ ಕೆಲಸ ಮಾಡಿ ಕುಟುಂಬ ನಿರ್ವಹಿಸುತ್ತಿದ್ದ ನಿವಾಸಿಗಳಿಗೆ ಈಗ ಸೀಲ್​ಡೌನ್​ನಿಂದ ಆರ್ಥಿಕವಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸ್ವಸಹಾಯ ಗುಂಪು, ಫೈನಾನ್ಸ್​ಗಳಲ್ಲಿ ಸಾಲ ಪಡೆದಿದ್ದೇವೆ. ಸಾಲದ ಕಂತು ಸಹ ತುಂಬಲು ಸಾಧ್ಯವಾಗುತ್ತಿಲ್ಲ. ಸಾಲ ತುಂಬುವಂತೆ ಸಂಬಂಧಪಟ್ಟವರು ಫೋನ್ ಕರೆ ಮಾಡುತ್ತಿದ್ದಾರೆ. ಕೂಡಲೆ ಜಿಲ್ಲಾಡಳಿತವಾಗಲಿ ಅಥವಾ ತಾಲೂಕಾಡಳಿತವಾಗಲಿ ಪರಿಹಾರ ನೀಡಿ ನಮ್ಮ ಜೀವ ಉಳಿಸಬೇಕು. ಇಲ್ಲದಿದ್ದರೆ ನಮ್ಮನ್ನು ಇಲ್ಲಿಂದ ಹೊರಗಡೆ ದುಡಿಯಲಿಕ್ಕೆ ಬಿಡಿ ಎಂದು ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಕೊಟ್ರೇಶ ಗಾಳಿ ಅವರು ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿ, ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ವಿ.ಎಸ್. ಬಣಗಾರ, ರಮೇಶ ಭದ್ರಾಪುರ, ಬಿ.ಎಸ್. ಹೊಳೆಣ್ಣವರ, ಸಂಜು ಸಮಗಾರ, ಜಗದೀಶ ಅಬ್ಬಿಗೇರಿಮಠ, ಪ್ರಕಾಶ ಕೊಂಡಗೋಳಿ, ಸೋಮಣ್ಣ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net