ಪರಿಹಾರಕ್ಕಾಗಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ, ಕೃಷಿ ಜಮೀನಿನಲ್ಲಿ ಬೆಸ್ಕಾಂನಿಂದ ವಿದ್ಯುತ್ ಮಾರ್ಗ ಅಳವಡಿಕೆ ಹಿನ್ನೆಲೆಯಲ್ಲಿ ರೈತ ಸಂಘ ಆಗ್ರಹ

10dbp1
Published on

ದೊಡ್ಡಬಳ್ಳಾಪುರ: ನೋಟಿಸ್ ನೀಡದೆ ಕೃಷಿ ಜಮೀನಿನಲ್ಲಿ ಬೆಸ್ಕಾಂನಿಂದ ವಿದ್ಯುತ್ ಮಾರ್ಗ ಅಳವಡಿಸಲಾಗುತ್ತಿದ್ದು, ರೈತರಿಗೆ ಸೂಕ್ತ ಪರಿಹಾರ ಕೊಡುವವರೆಗೆ ಮಾರ್ಗ ಅಳವಡಿಸಲು ಅವಕಾಶ ನೀಡುವುದಿಲ್ಲ ಎಂದು ರೈತ ಸಂಘದ ಮುಖಂಡರು, ಕಾರ್ಯಕರ್ತರು ಬುಧವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಗೌರಿಬಿದನೂರಿನಿಂದ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ಮತ್ತು ತೊಂಡೆಬಾವಿಗೆ ಬೆಸ್ಕಾಂನಿಂದ ವಿದ್ಯುತ್ ಮಾರ್ಗ ಅಳವಡಿಸಲಾಗುತ್ತಿದೆ. ದೊಡ್ಡಬಳ್ಳಾಪುರ ತಾಲೂಕಿನ 20 ಗ್ರಾಮಗಳ ಮೂಲಕ ಮಾರ್ಗ ಹಾದು ಹೋಗುತ್ತಿದೆ. ಕೃಷಿ ಜಮೀನುಗಳಲ್ಲಿ ಬೃಹತ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತಿದೆ. ನೋಟಿಸ್ ನೀಡದೆ, ಅನುಮತಿಯನ್ನೂ ಪಡೆಯದೆ ಕಂಬಗಳನ್ನು ಅಳವಡಿಸುತ್ತಿರುವುದು ರೈತರನ್ನು ಕೆರಳಿಸಿದೆ.

3 ಲೈನ್ ಬದಲು ಬೃಹತ್ ಕಂಬ: ಬೆಸ್ಕಾಂ ಈ ಮೊದಲು 3 ಲೈನ್‌ಗಳ ವಿದ್ಯುತ್ ಮಾರ್ಗ ಅಳವಡಿಸಲು ನಿರ್ಧರಿಸಿತ್ತು. ದಿಢೀರನೆ ತನ್ನ ಯೋಜನೆ ಬದಲಿಸಿ, ಬೃಹತ್ ಕಂಬಗಳನ್ನು ಅಳವಡಿಸಲು ಮುಂದಾಗಿದೆ. ಇದರಿಂದ ದೀರ್ಘಾವಧಿ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ ಎಂಬುದು ರೈತರ ಅಳಲಾಗಿದೆ. ಮಳೆ ಬಂದಾಗ ವಿದ್ಯುತ್ ಮಾರ್ಗದ ಕೆಳಗೆ ಹೋಗಲು ಭಯವಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ನಾಗಸಂದ್ರ ಪ್ರಸನ್ನಕುಮಾರ್ ಆತಂಕ ವ್ಯಕ್ತಪಡಿಸಿದರು.

ಸಣ್ಣ ಹಿಡುವಳಿದಾರರಿಗೆ ಕಷ್ಟ: ಇವತ್ತಿನ ಪರಿಸ್ಥಿತಿಯಲ್ಲಿ ಸಣ್ಣ ಹಿಡುವಳಿದಾರರು 10ರಿಂದ 20 ಗುಂಟೆ ಜಾಗದಲ್ಲಿ ಬೇಸಾಯ ಮಾಡುತ್ತಾರೆ. ಆ ಭೂಮಿಯಲ್ಲಿ ಬೃಹತ್ ವಿದ್ಯುತ್ ಕಂಬಗಳನ್ನು ಅಳವಡಿಸಿದರೆ, ಆ ರೈತರ ಪಾಡೇನು? ಇಡೀ ಭೂಮಿಯೇ ಅವರ ಪಾಲಿಗೆ ಇಲ್ಲವಾಗುತ್ತದೆ. ಆದ್ದರಿಂದ, ಇಂಥ ರೈತರಿಗೆ ಅವರು ಕಳೆದುಕೊಳ್ಳುವ ಭೂಮಿಯ ನಾಲ್ಕು ಪಟ್ಟು ಹೆಚ್ಚು ಪರಿಹಾರಧನ ಕೊಡಬೇಕು ಎಂದು ಪ್ರಸನ್ನಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.

ನೆಲದಡಿಯಲ್ಲಿ ಮಾರ್ಗ ಅಳವಡಿಸಿ: ವಿದ್ಯುತ್ ಮಾರ್ಗವನ್ನು ಭೂಮಿಯ ಮೇಲ್ಭಾಗದಿಂದ ಕೊಂಡೊಯ್ಯುವ ಬದಲು ನೆಲದಡಿಯಲ್ಲಿ ಅಳವಡಿಸಿ. ಇದರಿಂದ, ಕೃಷಿಗೆ ಹೆಚ್ಚಿನ ಸಮಸ್ಯೆ ಆಗುವುದಿಲ್ಲ. ಇಲ್ಲವಾದಲ್ಲಿ ನಮ್ಮ ಭೂಮಿಗೆ ಮುಂದಿನ 50 ವರ್ಷದಲ್ಲಿ ಬರಬಹುದಾದ ಬೆಲೆಯನ್ನು ಪರಿಹಾರಧನವಾಗಿ ನೀಡಬೇಕು ಎಂದು ಕೆಲ ರೈತರು ಆಗ್ರಹಿಸಿದರು.

ಕೊನೆಗೂ ಬಂದ ಎಸಿ, ತಹಸೀಲ್ದಾರ್: ರೈತ ಸಂಘದ ಮುಖಂಡರು ಮತ್ತು ಕಾರ್ಯಕರ್ತರು ಬುಧವಾರ ಬೆಳಗ್ಗೆ 11 ಗಂಟೆಯಿಂದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಆರಂಭಿಸಿದ್ದರು. ಅಲ್ಲದೆ, ತಹಸೀಲ್ದಾರ್ ಅವರು ಸ್ಥಳಕ್ಕೆ ಬಂದು, ತಮ್ಮೊಂದಿಗೆ ಮಾತನಾಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಮಧ್ಯಾಹ್ನ 3 ಗಂಟೆಗೆ ಎಸಿ ಅರುಳ್‌ಕುಮಾರ್, ತಹಸೀಲ್ದಾರ್ ಟಿ.ಎಸ್.ಶಿವರಾಜ್ ಸ್ಥಳಕ್ಕೆ ಬಂದು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಕೊನೆಗೊಳಿಸಿದರು.

ರೈತ ಮಹಿಳೆ ಸುಲೋಚನಮ್ಮ, ರೈತ ಸಂಘದ ಪದಾಧಿಕಾರಿಗಳಾದ ವಸಂತ್‌ಕುಮಾರ್, ಹರೀಶ್, ಮುನಿನಾರಾಯಣಪ್ಪ, ಶಾಂತಪ್ಪ, ಮುತ್ತೇಗೌಡ, ಶಿರವಾರ ರವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net