

ಮೈಸೂರು: ಭೂಮಿ ಕಳೆದುಕೊಂಡ ರೈತರಿಗೆ ಪಾವತಿಸಬೇಕಾದ ಹಣವನ್ನು ದುರುಪಯೋಗ ಮಾಡಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ದೊಡ್ಡಕೆರೆ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ನಂಜನಗೂಡು ತಾಲೂಕಿನ ಚಿಕ್ಕಯ್ಯನಛತ್ರ ಹೋಬಳಿ ಇಮ್ಮಾವು ಗ್ರಾಮದ ಸರ್ವೇ ನಂ.390ರಿಂದ 430ರ ವರೆಗಿನ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ಪಾವತಿಸಲು ಬಿಡುಗಡೆ ಮಾಡಿರುವ ಹಣ ವಿತರಣೆಯಲ್ಲಿ ಅಕ್ರಮ ನಡೆದಿದೆ. ಈ ಸಂಬಂಧ 125 ದಿನಗಳಿಂದ ಹೋರಾಟ ನಡೆಸುತ್ತಿದೆ. ಆದಾಗ್ಯೂ, ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ಕಿಡಿಕಾರಿದರು.
ಈ ಅಕ್ರಮದ ಕುರಿತು ಜಿಲ್ಲಾಧಿಕಾರಿ 30 ದಿನದೊಳಗೆ ಸಮಗ್ರ ತನಿಖೆ ನಡೆಸಿ ವರದಿಯನ್ನು ಸಲ್ಲಿಸಲು ತನಿಖಾಧಿಕಾರಿ ನೇಮಿಸಲಾಗಿದೆ. ಆದರೆ 2 ತಿಂಗಳಾದರೂ ಈವರೆಗೂ ವರದಿ ಸಲ್ಲಿಕೆಯಾಗಿಲ್ಲ. ಜತೆಗೆ, ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿರುವ ನಂಜನಗೂಡು ತಹಸೀಲ್ದಾರ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಅಕ್ರಮದಲ್ಲಿ ಭಾಗಿಯಾಗಿರುವ ನಂಜನಗೂಡು ತಹಸೀಲ್ದಾರ್ ಅವರನ್ನು ಅಮಾನತು ಮಾಡಬೇಕು. ತನಿಖಾ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ರೈತರಿಗೆ ಪರಿಹಾರ ಮತ್ತು ಕಾಯಂ ಹುದ್ದೆಯನ್ನು ನೀಡಬೇಕು. ಈ ಬೇಡಿಕೆಗಳನ್ನು ಒಂದು ವಾರದಲ್ಲಿ ಈಡೇರಿಸಬೇಕು. ಇಲ್ಲವಾದರೆ, ಹೋರಾಟ ಇನ್ನಷ್ಟು ಉಗ್ರವಾಗಲಿದೆ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಹೊಸಕೋಟೆ ಬಸವರಾಜು, ನೇತ್ರಾವತಿ, ಹೊಸೊರು ಕುಮಾರ್, ಪಿ.ಮರಂಕಯ್ಯ, ಪ್ರೇಮ್‌ರಾಜ್ ಇನ್ನಿತರರಿದ್ದರು.