

ಬೆಳಗಾವಿ: ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನೇಗಿಲಯೋಗಿ ರೈತ ಸಂಘಟನೆ ನೇತೃತ್ವದಲ್ಲಿ ಸವದತ್ತಿ ತಾಲೂಕಿನ ಇಂಚಲ ಹಾಗೂ ಹಿರೇಕೊಪ್ಪ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು. ಸವದತ್ತಿ ತಾಲೂಕಿನ ಇಂಚಲ ಹಾಗೂ ಹಿರೇಕೊಪ್ಪ ಗ್ರಾಮದಲ್ಲಿ ಅತಿಯಾದ ಮಳೆಯಿಂದಾಗಿ 2019-20ರಲ್ಲಿ 27 ಮನೆಗಳು ಸಂಪೂರ್ಣ ಹಾನಿಯಾಗಿದ್ದವು. ಮನೆಗಳ ಪರಿಹಾರಕ್ಕೆಂದು ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸಲಾಗಿತ್ತು.
ಇಂಚಲ ಗ್ರಾಪಂ ವ್ಯಾಪ್ತಿಯಲ್ಲಿನ ಇಂಚಲ, ಮರಕುಂಬಿ ಹಾಗೂ ಹಿರೇಕೊಪ್ಪ ಗ್ರಾಮದ ಮನೆ ಕಳೆದುಕೊಂಡು ಅರ್ಹ ಫಲಾನುಭವಿಗಳಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಗ್ರಾಮಗಳಲ್ಲಿ ಹಾನಿಗೊಳಗಾದ 27 ಮನೆಗಳ ಪೈಕಿ 3 ಮನೆಗಳಿಗೆ ಮಾತ್ರ ಪರಿಹಾರ ಬಿಡುಗಡೆಯಾಗಿದೆ. ಉಳಿದ ನಿರಾಶ್ರಿತರರಿಗೆ ಪರಿಹಾರ ಬಿಡುಗಡೆಗೊಂಡಿಲ್ಲ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಸಕಾಲಕ್ಕೆ ಪರಿಹಾರ ವಿತರಿಸುವ ಕೆಲಸ ಮಾಡಬೇಕು ಎಂದು ಕೋರಿದರು. ನೇಗಿಲ ಯೋಗಿ ರೈತ ಸಂಘದ ಅಧ್ಯಕ್ಷ ರವಿ ಪಾಟೀಲ, ಸುರೇಶ ವಾಲಿ, ಶಕುಂತಲಾ ಈಳಿಗೇರ, ಮಲ್ಲಿಕಾರ್ಜುನ ಜುಟ್ಟನವರ, ರಾಜಶೇಖರ ಜಕನಗವಟ್ಟರ, ಕಲ್ಲಪ್ಪ ಯರಿನಾಳ ಇದ್ದರು.