

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ನೀಡಿರುವ ಪರಿಹಾರ ಧನವನ್ನು ಹಿಂತಿರುಗಿಸಲು ಸಂತ್ರಸ್ಥರು ಮುಂದಾಗಿದ್ದಾರೆ.
ನಗರದ ಜಿಲ್ಲಾಸ್ಪತ್ರೆಯಲ್ಲಿ 2021 ಮೇ.2 ರಂದು ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಅಂದಿನ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 1 ಲಕ್ಷ ರೂ, ಪರಿಹಾರವನ್ನು ಪ್ರತಿಯೊಂದು ಕುಟುಂಬಗಳಿಗೂ ನೀಡಿಲಾಗಿತ್ತು. ಅದರಂತೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸಂತ್ರಸ್ತ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡುತ್ತೇವೆ ಎಂದು ಭರವಸೆಯನ್ನು ನೀಡಿತ್ತು. ಆದರೇ ಈ ಭರವಸೆ ಇಂದಿಗೂ ಭರವಸೆಯಾಗಿಯೇ ಉಳಿಯಿತು. ಮಲೆ ಮಹದೇಶ್ವರಬೆಟ್ಟದಲ್ಲಿ ಏ.24 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ದೊರೆಯುತ್ತದೆ ಎಂಬ ಭರವಸೆಯನ್ನು ಸಂತ್ರಸ್ತರು ಇಟ್ಟುಕೊಂಡಿದ್ದರು. ಆದರೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸುತ್ತೇವೆ ಎಂದು ಹೇಳಿ ಕೈತೊಳೆದುಕೊಂಡರು. ಜಿಲ್ಲಾಡಳಿತ ಭವನದಲ್ಲಿ ಸಂತ್ರಸ್ತರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಆಕ್ಸಿಜನ್ ದುರಂತ ನಡೆದು ಮೇ.2 ಕ್ಕೆ 4 ವರ್ಷಗಳು ತುಂಬಲಿದ್ದು, ಕಾಂಗ್ರೆಸ್ ಸರ್ಕಾರ ಸಂತ್ರಸ್ತರಿಗೆ ನೀಡಿರುವ ಪರಿಹಾರವನ್ನು ಹಿಂತಿರುಗಿಸಲು ಮುಂದಾಗಿದ್ದಾರೆ. ಈ ವಾರದ ಲೌಡ್‌ಸ್ಪೀಕರ್‌ನಲ್ಲಿ ಸಂತ್ರಸ್ತ ಕುಟುಂಬದವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
*ಪಕ್ಷದ ಹಣವನ್ನು ಹಿಂತಿರುಗಿಸುತ್ತೇವೆ
ಜಿಲ್ಲೆಯಲ್ಲಿ ನಡೆದ ಸಚಿವ ಸಂಪುಟದ ಮೇಲೆ ನಾವು ಭರವಸೆಯನ್ನು ಇಟ್ಟುಕೊಂಡಿದ್ದೇವು. ಆದರೆ ಇಲ್ಲೂ ಕೂಡ ನಿರಾಸೆಯಾಯಿತು. ನಾವು ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗವನ್ನು ಕೊಡಲು ಆಗುವುದಿಲ್ಲ ಎಂದು ನೇರವಾಗಿ ಹೇಳಲಿ. ಅವರೇ ನೀಡಿರುವ ಸರ್ಕಾರಿ ಉದ್ಯೋಗದ ಭರವಸೆಯನ್ನು ಅವರೇ ಈಡೇರಿಸಲಿಲ್ಲ ಅಂದರೇ, ಅವರು ಪಕ್ಷದ ವತಿಯಿಂದ ಕೊಟ್ಟಿರುವ ಹಣವನ್ನು ನಾವು ಯಾಕೇ ಇಟ್ಟುಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ವತಿಯಿಂದ ನೀಡಿರುವ 1 ಲಕ್ಷ ರೂ, ಪರಿಹಾರವನ್ನು ನಾವು ವಾಪಸ್ ಮಾಡುತ್ತೇವೆ. ನಮ್ಮ ಪ್ರತಿಭಟನೆಯನ್ನು ಹೋರಾಟವನ್ನು ನಿಲ್ಲಿಸುತ್ತೇವೆ. ಈ ನಿಟ್ಟಿನಲ್ಲಿ ಎಲ್ಲರೂ ತೀರ್ಮಾನ ಮಾಡಿಕೊಂಡಿದ್ದೇವೆ. ಮೇ.2 ರಂದು ದುರಂತ ನಡೆದು ನಾಲ್ಕೂ ವರ್ಷಗಳು ತುಂಬುತ್ತಿದ್ದು, ಸಂತ್ರಸ್ತರು ಸಭೆ ನಡೆಸಿ ಮುಂದಿನ ನಿರ್ಧಾರ ತಿಳಿಸುತ್ತೇವೆ.
ಮಂಜುನಾಥ್, ಸಂತ್ರಸ್ತ, ನಲ್ಲೂರು, ಚಾಮರಾಜನಗರ
*ಸೌಜನ್ಯಕ್ಕಾದರೂ ಸ್ಪಂದಿಸಲಿಲ್ಲ
ಕಾಂಗ್ರೆಸ್ ಪಕ್ಷದವರು ವಿರೋಧ ಪಕ್ಷದಲ್ಲಿ ಇದ್ದಾಗ, ಮುಂದಿನ ಚುನಾವಣೆಗಾಗಿ ಮಾತ್ರ ಆಕ್ಸಿಜನ್ ದುರಂತವನ್ನು ಬಳಕೆ ಮಾಡಿಕೊಂಡರು ಎಂದೆನಿಸುತ್ತದೆ. ಚುನಾವಣೆ ಮುಗಿದು ಅಧಿಕಾರಕ್ಕೆ ಬಂದ ನಂತರ ಆಕ್ಸಿಜನ್ ಸಂತ್ರಸ್ತ ಕುಟುಂಬದವರಿಗೆ ಉದ್ಯೋಗ ನೀಡುತ್ತೇವೆ ಎಂಬ ಭರವಸೆಯನ್ನು ಮರೆತಿದ್ದಾರೆ. ಇತ್ತೀಚೆಗೆ ಜಿಲ್ಲಾಡಳಿತ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಹೋದಾಗ ಸೌಜನ್ಯಕ್ಕಾದರೂ ನಮ್ಮ ಮನವಿ ಆಲಿಸಲಿಲ್ಲ. ಮೇ.2 ರಂದು ದುರಂತಕ್ಕೆ ನಾಲ್ಕೂ ವರ್ಷಗಳು ತುಂಬುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ನೀಡಿದ್ದ ಪರಿಹಾರ ಧನವನ್ನು ಹಿಂತಿರುಗಿಸಲು ನಿರ್ಧಾರ ಮಾಡಿದ್ದೇವೆ.
ಸವಿತಾ, ಲಕ್ಕೂರು, ಚಾಮರಾಜನಗರ
*ನನ್ನ ಪ್ರಾಣವೂ ಹೋಗಲಿ
ಆಕ್ಸಿಜನ್ ದುರಂತದಲ್ಲಿ ನನ್ನ ಪತಿ ಬಲಿಯಾದರು. ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ನಾಯಕರು ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿತ್ತು. 1 ಲಕ್ಷ ರೂ, ಪರಿಹಾರವನ್ನು ನೀಡಿದ್ದರು. ಆದರೆ ಸರ್ಕಾರಿ ಉದ್ಯೋಗದ ಭರವಸೆ ಈಡೇರಿಸಿಲ್ಲ. ಜಿಲ್ಲೆಯಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು ಸಂತ್ರಸ್ತರಿಗೆ ಸ್ಪಂದಿಸಲಿಲ್ಲ. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಇದರಿಂದ ನಾವೆಲ್ಲರೂ ಸೀಮ್ಸ್ ಆಸ್ಪತ್ರೆ ಮುಂಭಾಗ ಮೇ.2 ರಂದು ಉಪವಾಸದ ಧರಣಿ ಕೈಗೊಳ್ಳುತ್ತಿದ್ದೇವೆ. ಹಾಗೆಯೇ ಕೊಟ್ಟ 1 ಲಕ್ಷ ರೂ, ಪರಿಹಾರವನ್ನು ಸರ್ಕಾರಕ್ಕೆ ಹಿಂದಿರುಗಿಸುತ್ತೇವೆ. ನನ್ನ ಪತಿ ಪ್ರಾಣಹೋದ ಸ್ಥಳದಲ್ಲಿಯೇ ನನ್ನ ಪ್ರಾಣವೂ ಹೋಗಲಿ.
ಪುಷ್ಪ, ಸಂತ್ರಸ್ತೆ, ಸತ್ತೇಗಾಲ ಗ್ರಾಮ, ಕೊಳ್ಳೇಗಾಲ
*ಅವರೇ ನೀಡಿದ್ದ ಭರವಸೆ
ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಉದಯೋಗ ನೀಡಿ ಎಂದು ನಾವೇನು ಬೇಡಿಕೊಂಡಿರಲಿಲ್ಲ. ಕಾಂಗ್ರೆಸ್ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬಂದು ಪರಿಹಾರವನ್ನು ನೀಡಿ, ಸಕಾರಿ ಉದ್ಯೋಗವನ್ನು ನೀಡುತ್ತೇವೆ ಎಂಬ ಭರವಸೆಯನ್ನು ಅವರೇ ನೀಡಿದ್ದರು. ಆದರೇ ಈ ವರೆಗೂ ತಾವು ಕೊಟ್ಟ ಭರವಸೆಯನ್ನು ಈಡೇರಿಸಲಿಲ್ಲ. ಈಗಲಾದರೂ ಅವರ ಕೊಟ್ಟಂತಹ ಭರವಸೆಯನ್ನು ಉಳಿಸಿಕೊಳ್ಳಲಿ. ಮೇ.2 ರ ನಂತರ ನಾವು ಯಾವ ರೀತಿಯ ಹೋರಾಟ ಮಾಡುತ್ತೇವೆ ಎಂಬುದು ಚರ್ಚಿಸಿ, ತೀರ್ಮಾನಿಸುತ್ತೇವೆ.
ಅರುಣ್ ಕುಮಾರ್, ಸಂತ್ರಸ್ತ, ಚಾಮರಾಜನಗರ
*ಕಾಂಗ್ರೆಸ್ ನ್ಯಾಯವನ್ನು ನೀಡಲಿಲ್ಲ
ಜಿಲ್ಲೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಮೇಲೆ ಬಹುದೊಡ್ಡ ನೀರೀಕ್ಷೆಯನ್ನು ಇಟ್ಟುಕೊಂಡಿದ್ದೇವು. ಆದರೇ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಮಗೆ ಸರ್ಕಾರಿ ಉದ್ಯೋಗವನ್ನು ನೀಡಲಿಲ್ಲ. ಆಕ್ಸಿಜನ್ ದುರಂತದಲ್ಲಿ ಮಡಿದವರಿಗೆ ನ್ಯಾಯವನ್ನು ನೀಡಲಿಲ್ಲ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಮುಂದಾದಾಗ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನೀಡಿದ್ದ ಪರಿಹಾರವನ್ನು ನಾವು ಹಿಂತಿರುಗಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಮೇ.2 ರಂದು ಪ್ರತಿಭಟನೆಯನ್ನು ನಡೆಸುವ ಮೂಲಕ ಅವರ ಹಣವನ್ನು ವಾಪಸ್ ನೀಡುತ್ತೇವೆ.
ನಂದಿನಿ, ಸಂತ್ರಸ್ತೆ, ಚಂದಕವಾಡಿ, ಚಾಮರಾಜನಗರ
*ಆತ್ಮಹತ್ಯೆ ಒಂದೇ ಮಾರ್ಗ
ಆಕ್ಸಿಜನ್ ದುರಂತದಲ್ಲಿ ನಮ್ಮ ಪತಿಯನ್ನು ಕಳೆದುಕೊಂಡು ಹಲವಾರು ಮಹಿಳೆಯರು ತುಂಬಾ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಈಗಾಗಲೇ 4 ವರ್ಷಗಳಿಂದ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬರುತ್ತಿದ್ದೇವೆ. ಆದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯಲ್ಲೂ ಸ್ಪಂದನೆ ನೀಡಲಿಲ್ಲ. ಸರ್ಕಾರಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿ ನಮ್ಮನ್ನು ನಡುದಾರಿಯಲ್ಲಿ ನಿಲ್ಲಿಸಿದೆ. ಕಾಂಗ್ರೆಸ್ ಸಂತ್ರಸ್ತ ಕುಟುಂಬಗಳಿಗೆ ನೀಡಿರುವ 1 ಲಕ್ಷ ರೂ, ಪರಿಹಾರವನ್ನು ಹಿಂತಿರುಗಿಸುವುದು ಮತ್ತು ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಒಂದೇ ಮಾರ್ಗ ನಮಗೆ ಉಳಿದಿರುವುದು.
ನಾಗರತ್ನ, ಸಂತ್ರಸ್ತೆ, ಚಾಮರಾಜನಗರ
*ಮಾನವೀಯತೆ ಮರೆತರು
ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ನಡೆದಾಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ಕಾಂಗ್ರೆಸ್ ಸರ್ಕಾರ ದುರಂತದಲ್ಲಿ ಮಡಿದವರ ಪ್ರತಿಯೊಂದು ಮನೆಗೂ ಭೇಟಿ ನೀಡಿ 1 ಲಕ್ಷ ರೂ, ಪರಿಹಾರವನ್ನು ನೀಡಿದ್ದರು. ಆದರೇ ಅಧಿಕಾರಕ್ಕೆ ಬಂದ ನಂತರ ಮಾನವೀಯತೆಯನ್ನು ಮರೆತುಬಿಟ್ಟರು. ಸಂಕಷ್ಟದಲ್ಲಿ ಇರುವ ಮಹಿಳೆಯರ ಬಗ್ಗೆ ಅರಿವಿದ್ದರೂ ಕೂಡ ಅವರಿಗೆ ಸರ್ಕಾರಿ ಉದ್ಯೋಗ ನೀಡಲು ಹಿಂದೇಟು ಹಾಕಿದರು. ಈಗ ಸಮಸ್ಯೆ ಅನುಭವಿಸುತ್ತಿರುವ ಮಹಿಳೆಯರು ಉಪವಾಸ ಕುಳಿತು ಸಾಯುತ್ತೇವೆ ಎನ್ನುತ್ತಿದ್ದಾರೆ. ನಾನು ಕೂಡ ಕಾಂಗ್ರೆಸ್ ಪಕ್ಷ ನೀಡಿದ ಪರಿಹಾರವನ್ನು ಹಿಂತಿರುಗಿಸುತ್ತೇನೆ.
ರಾಜಶೇಖರ್, ಮಂಗಲ ಹೊಸೂರು, ಚಾಮರಾಜನಗರ
*ನಂಬಿಕೆ ಕಳೆದುಕೊಂಡಿದ್ದೇವೆ
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರಿಗೆ ಉದ್ಯೋಗ ನೀಡುವಂತೆ ಕಾಂಗ್ರೆಸ್ ಸರ್ಕಾರ ಭರವಸೆಯನ್ನು ನೀಡಿತ್ತು. ಆದರೇ ಮೇ.2 ಕ್ಕೆ ನಾಲ್ಕೂ ವರ್ಷಗಳು ಆಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಉದ್ಯೋಗ ನೀಡುತ್ತದೆ ಎಂಬ ನಂಬಿಕೆಯಂತೂ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ನಡೆದ ಸಚಿವ ಸಂಪುಟದ ಮೇಲೆ ಚೂರು ವಿಶ್ವಾಸವಿತ್ತು. ಆದರೇ ಈಗ ಸಂಪೂರ್ಣವಾಗಿ ನಂಬಿಕೆಯನ್ನು ಕಳೆದುಕೊಂಡಿದ್ದೇವೆ.
ರಮೇಶ್ ಬಾಬು, ಸಂತ್ರಸ್ತ, ಚಾಮರಾಜನಗರ