ಪರಿಹಾರ ಬೇಡ ಸುರಕ್ಷಿತ ಜಾಗ ಕೊಡಿ

26KWR1
Published on

ಕಾರವಾರ: ‘ನಮಗೆ ಪರಿಹಾರ ಬೇಡ ಇರಲೊಂದು ಸುರಕ್ಷಿತ ಜಾಗ ಕೊಡಿ’ ಇದು ಕದ್ರಾದ ಲೇಬರ್ ಕಾಲನಿಯ ಕುಟುಂಬಗಳ ಆಗ್ರಹ. ಎರಡು ದಿನಗಳ ಹಿಂದೆ ಸಂಭವಿಸಿದ ನೆರೆಗೆ ಕಾಲನಿಯ ಐದಕ್ಕೂ ಹೆಚ್ಚು ಮನೆಗಳು ಬಿದ್ದು ಹೋಗಿವೆ. ಎಲ್ಲ 110 ಮನೆಗಳ ದಿನಬಳಕೆ ಸಾಮಗ್ರಿಗಳು ಪ್ರಯೋಜನಕ್ಕೆ ಬಾರದಂತಾಗಿವೆ. ದುಡಿದು ಅಂದಿನ ಅನ್ನ ಅಂದೇ ಸಂಪಾದಿಸುವ ಕಡು ಬಡ ಕೂಲಿಕಾರರ ಕುಟುಂಬಗಳು ಕಷ್ಟಪಟ್ಟು ಕಟ್ಟಿದ ಬದುಕು ಬರಬಾದಾಗಿಬಿಟ್ಟಿದೆ. ದಿನವೂ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

‘2019 ರಲ್ಲಿ ಪ್ರವಾಹ ಬಂದಿತ್ತು. ತುರ್ತು 10 ಸಾವಿರ ರೂ. ಪರಿಹಾರ ನೀಡಿದ್ದು ಬಿಟ್ಟರೆ. ಬೇರೆ ನೆರವು ಸಿಕ್ಕಿಲ್ಲ. ಇಲ್ಲಿ ಮತ್ತೆ ಮತ್ತೆ ನೆರೆ ಬಂದು ಜೀವನವನ್ನು ನರಕ ಮಾಡಿಬಿಡುತ್ತದೆ. ಪ್ರವಾಹ ಬಂದಾಗ ಕೆಪಿಸಿ ಕ್ವಾರ್ಟರ್ಸ್​ಗಳಲ್ಲಿ ಕೆಲ ದಿನ ಆಶ್ರಯಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ನಂತರ ಮತ್ತೆ ಖಾಲಿ ಮಾಡಿಸಲಾಗುತ್ತದೆ. ಇದರಿಂದ ನಾವು ಬೇರೆಡೆ ಹೋಗಲು ಸಿದ್ಧರಿದ್ದೇವೆ’ ಎಂಬುದು ಇಲ್ಲಿನ ಜನರ ಅಂಬೋಣ.

200ಕ್ಕೂ ಅಧಿಕ ಮನೆಗಳು: ಸಮೀಪದಲ್ಲೇ ಕರ್ನಾಟಕ ವಿದ್ಯುತ್ ನಿಗಮ ಅರಣ್ಯ ಇಲಾಖೆಯಿಂದ ಲೀಸ್​ನಲ್ಲಿ ಪಡೆದ ಹತ್ತಾರು ಎಕರೆ ಜಾಗ ಖಾಲಿ ಇದೆ. 200 ಕ್ಕೂ ಹೆಚ್ಚು ಕ್ವಾರ್ಟಸ್​ಗಳು ಖಾಲಿ ಬಿದ್ದಿವೆ. ಲೇಬರ್ ಕಾಲನಿಯಲ್ಲಿ 110 ಮನೆಗಳಿದ್ದು, ಹೆಚ್ಚಿನವರು ಸುಮಾರು ಮೂರು ತಲೆಮಾರುಗಳಿಂದ ಇಲ್ಲಿಯೇ ವಾಸವಿದ್ದಾರೆ. ಗ್ರಾಪಂಗೆ ಕರ ಕಟ್ಟುತ್ತಿದ್ದಾರೆ. ವಿದ್ಯುತ್ ಸಂಪರ್ಕ ನೀಡಲಾಗಿದೆ. ಹೆಚ್ಚಿನವರು ಮಲ್ಲಾಪುರ ಹಾಗೂ ಕೈಗಾದಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಾರೆ. ಕೆಪಿಸಿಗೆ ಸೇರಿದ ಖಾಲಿ ಜಾಗವನ್ನು ನೀಡಿದರೆ ನಾವು ಮನೆ ಕಟ್ಟಿಕೊಳ್ಳುತ್ತೇವೆ. ಇಲ್ಲವೇ ಪಾಳು ಬಿದ್ದ ಕ್ವಾರ್ಟಸ್​ಗಳನ್ನಾದರೂ ನೀಡಿದರೆ ರಿಪೇರಿ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

ಇತ್ತೀಚಿನ ಕೆಲ ವರ್ಷಗಳಲ್ಲಿ ಪ್ರತಿ ಮಳೆಗಾಲದಲ್ಲಿ ನಮ್ಮ ಲೇಬರ್ ಕಾಲನಿಗೆ ನೀರು ನುಗ್ಗುತ್ತದೆ. ಇಲ್ಲವೇ ಮರ ಬಿದ್ದು ಹಾನಿಯಾಗುತ್ತದೆ. ನಮ್ಮ ಮನೆಗಳು ಅರಣ್ಯ ಅತಿಕ್ರಮಣ ಪ್ರದೇಶದಲ್ಲಿರುವುದರಿಂದ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ. ಸರ್ಕಾರದಿಂದ ವಸತಿ ವ್ಯವಸ್ಥೆ ಇದೆ ಎನ್ನುತ್ತಾರೆ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. | ಹಸನ್ ಶೇಖ್, ಕದ್ರಾ ಲೇಬರ್ ಕಾಲನಿ ನಿವಾಸಿಅತಿಕ್ರಮಣ ಪ್ರದೇಶದಲ್ಲಿರುವ ಜನರ ವಾಸ್ತವ್ಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅಧಿಕಾರಿಗಳ ಒಂದು ತಂಡ ರಚಿಸಿ ವರದಿ ನೀಡಲು ಹೇಳಿದ್ದೇನೆ. ವರದಿ ಪಡೆದು ಪರಿಶೀಲನೆ ನಡೆಸಲಾಗುತ್ತದೆ. | ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net