ಪರಿಹಾರ ನೀಡಿದ ನಂತರ ಕಾಮಗಾರಿ

18 Budikote 2 Bus stop
Published on

ಬಂಗಾರಪೇಟೆ ಗ್ರಾಮಾಂತರ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆಯಿಂದ ರೈತರಿಗೆ ಪರಿಹಾರ ವಿತರಣೆಯಾದ ಬಳಿಕವಷ್ಟೇ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಭಾನುವಾರ ಬಂಗಾರಪೇಟೆ ತಾಲೂಕು ಕುಪ್ಪನಹಳ್ಳಿ ಬಳಿ ಸಂಸದರ ನಿಧಿಯಿಂದ ನಿರ್ಮಿಸಲಾಗಿರುವ ಬಸ್ ತಂಗುದಾಣ ಉದ್ಘಾಟನೆ ಸಂದರ್ಭದಲ್ಲಿ ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿದರು.

ಬೆಂಗಳೂರಿನಿಂದ ಚೆನ್ನೈಗೆ ತ್ವರಿತವಾಗಿ ಸಂಚರಿಸಲು ಸರ್ಕಾರ ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆ ಆರಂಭಿಸಿದೆ. ಈ ಯೋಜನೆಗಾಗಿ ಜಮೀನು ಸ್ವಾಧೀನಪಡಿಸಿಕೊಂಡಿರುವ ರೈತರಿಗೆ ಬಂಗಾರಪೇಟೆ ಭಾಗದಲ್ಲಿ ಇನ್ನೂ ಪರಿಹಾರ ವಿತರಿಸಿಲ್ಲ ಎಂದರು. ಪರಿಹಾರ ನೀಡದೆ ಜಮೀನಿನಲ್ಲಿ ಮರ ತೆರೆವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಪೂರ್ಣ ಪರಿಹಾರದ ಹಣ ನೀಡಿದ ಬಳಿಕ ಕಾಮಗಾರಿ ಆರಂಭಿಸಲು ರೈತರು ಮನವಿ ನೀಡಿದ್ದಾರೆ. ಈಗಾಗಲೆ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಕಾರಿಡಾರ್ ಯೋಜನೆಗೆ ಸ್ವಾಧೀನಪಡಿಕೊಂಡಿರುವ ಭೂಮಿ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲದಕ್ಕೂ ಪರಿಹಾರ ನೀಡಿರುವ ಸ್ಥಳದಲ್ಲಿ ಕೆಲಸ ಆರಂಭಿಸುತ್ತಾರೆ. ಬಾಕಿ ಇರುವ ಪರಿಹಾರ ನೀಡಿದ ನಂತರ ಕಾವಗಾರಿ ಆರಂಭಿಸಲು ಸೂಚಿಸಲಾಗಿದೆ ಎಂದರು.

ಪ್ರಯಾಣಿಕರ ಅನುಕೂಲಕ್ಕಾಗಿ ಬಂಗಾರಪೇಟೆ ತಾಲೂಕಿನ ಕುಪ್ಪನಹಳ್ಳಿ, ದೇಶಿಹಳ್ಳಿ ಮತ್ತು ಸೋರೆಗೌಡನಕೋಟೆ ಗ್ರಾಮಗಳಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಮೂರು ತಂಗುದಾಣ ನಿರ್ಮಿಸಲಾಗಿದೆ. ಬೂದಿಕೋಟೆಯಲ್ಲೂ ತಂಗುದಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದರು.

ಜಿಪಂ ಸದಸ್ಯರಾದ ಬಿ.ವಿ. ಮಹೇಶ್, ಮಾಲಾ ಶ್ರೀನಿವಾಸಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊಸರಾಯಪ್ಪ, ತಾಲೂಕು ಅಧ್ಯಕ್ಷ ನಾಗೇಶ್, ನಗರ ಘಟಕ ಅಧ್ಯಕ್ಷ ಶಶಿಕುಮಾರ್, ಮುಖಂಡರಾದ ಎಂ.ಸಿ.ಜೆ. ವೇಲ್ ಮುರುಗನ್, ಹನುಮಪ್ಪ, ಪುರಸಭೆ ಸದಸ್ಯರಾದ ಸೌಂದರ್ಯ ಪ್ರಭಾಕರ್ ರಾವ್, ಬಿ.ಪಿ. ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net