ಪರಿಹಾರ ಕಾರ್ಯಕ್ಕೆ ನೀತಿ ಸಂಹಿತೆ ತೊಡಕು, ವಿನಾಯಿತಿಗೆ ಚುನಾವಣಾ ಆಯೋಗಕ್ಕೆ ಮನವಿ; ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ

21CBP2a
Published on

ಚಿಕ್ಕಬಳ್ಳಾಪುರ: ಪ್ರಸ್ತುತ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರಾಕೃತಿಕ ವಿಕೋಪಗಳ ಪರಿಹಾರಕ್ಕೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ವಿನಾಯಿತಿ ನೀಡಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ವಿವಿಧ ಮಳೆಬಾಧಿತ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ನೀತಿ ಸಂಹಿತೆಯಿಂದಾಗಿ ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲು ತೊಡಕಾಗುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಸ್ಪರ ಒಟ್ಟಿಗೆ ಕೆಲಸ ನಿರ್ವಹಣೆಗೂ ಸಮಸ್ಯೆಯಾಗಿದ್ದು, ಅಪಾರ ಪ್ರಮಾಣದ ನಷ್ಟದಿಂದ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ವಿನಾಯಿತಿ ನೀಡಲು ರಾಜ್ಯ ಚುನಾವಣಾ ಆಯೋಗವನ್ನು ಕೋರಿದ್ದೇವೆ, ಸೂಕ್ತ ಪ್ರತಿಕ್ರಿಯೆ ಸಿಗುವ ವಿಶ್ವಾಸವಿದೆ ಎಂದರು.

ರಾಜ್ಯ ಸಚಿವ ಸಂಪುಟದ ಸದಸ್ಯರು ಮಳೆಬಾಧಿತ ಪ್ರದೇಶಗಳಲ್ಲಿ ಜನರ ಕಷ್ಟಗಳನ್ನು ಆಲಿಸುತ್ತಿದ್ದಾರೆ. ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಆಯಾ ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ವ್ಯಾಪಕ ಮಳೆಯಿಂದಾಗಿ ಹಲವು ಬೆಳೆಗಳು, ಮನೆಗಳಿಗೆ ಹಾನಿಗೊಳಗಾಗಿದ್ದು ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಇದರ ಬಗ್ಗೆ ಸಮೀಕ್ಷೆ ನಡೆಸಿ ಸಮಗ್ರ ವರದಿ ನೀಡಲು ಆಯಾ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಈಗಾಗಲೇ ಪ್ರಾಥಮಿಕ ವರದಿ ಲಭ್ಯವಿದ್ದು ನಷ್ಟದ ಸಮಗ್ರ ಮಾಹಿತಿ ಸಂಗ್ರಹ, ವಿಶ್ಲೇಷಣೆ ಕಾರ್ಯ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ಸ್ಪಷ್ಟತೆ ದೊರೆಯಲಿದೆ, ನಿಖರ ವರದಿ ಬಂದ ತಕ್ಷಣ ಆಯಾ ಜಿಲ್ಲೆಗಳಿಗೆ ಸಿಗಬೇಕಾದ ಪರಿಹಾರ ಹಣದ ಬಗ್ಗೆ ನಿರ್ಧರಿಸಿ, ಆದ್ಯತೆ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಪೂರ್ತಿಯಾಗಿ ಕುಸಿದ ಮನೆಗಳಿಗೆ ತಲಾ ೫ ಲಕ್ಷ ರೂ, ಭಾಗಶಃ ಕುಸಿದು ಬಿದ್ದ ಮನೆಗಳಿಗೆ ಹಾನಿಗನುಸಾರವಾಗಿ ಪರಿಹಾರ ನೀಡಲಾಗುವುದು. ಅಲ್ಪ ಪ್ರಮಾಣದಲ್ಲಿ ಹಾನಿಗೊಳಗಾದ ಮನೆಗಳಿಗೆ ೫೦ ಸಾವಿರ ನೀಡಲು ಅವಕಾಶವಿದ್ದು, ನೀರು ನುಗ್ಗಿರುವ ಮನೆಗಳಿಗೆ ೧೦ ಸಾವಿರ ರೂ. ಪರಿಹಾರ ಸಿಗಲಿದೆ ಎಂದರು.

ವಿವಿಧೆಡೆ ಭೇಟಿ, ಪರಿಶೀಲನೆ: ಜಿಲ್ಲೆಯ ವಿವಿಧೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ದಾಖಲೆ ಪ್ರಮಾಣದ ಧಾರಾಕಾರ ಮಳೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು. ನಗರದ ಬಿ.ಬಿ.ರಸ್ತೆಯಲ್ಲಿ ಹಾದು ಹೋಗಿರುವ ಕಂದವಾರ ಕೆರೆಯ ರಾಜಕಾಲುವೆಯಲ್ಲಿ ನೀರಿನ ಹರಿವು, ರಸ್ತೆ ಸಂಚಾರಕ್ಕೆ ಅಡ್ಡಿ ಮತ್ತು ಎದುರಾಗಿರುವ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದು ಬಳಿಕ ಶಿಡ್ಲಘಟ್ಟ ತಾಲೂಕಿನ ಆನೆಮಮಡಗು ಅಗ್ರಹಾರ ಕೆರೆ, ದೊಡ್ಡಬಂಧರ್ ಘಟ್ಟ, ಗುಡಿಬಂಡೆ ಟ್ಯಾಂಕ್ ವೀಕ್ಷಿಸಿದರು. ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ವ್ಯಾಪಕ ಮಳೆಯಿಂದಾಗಿ ೨೪ ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು, ೧,೦೭೮ ಮನೆಗಳು ಭಾಗಶಃ ಹಾನಿಯಾಗಿವೆ ಎಂದರು.

ತ್ವರಿತ ಡಿಪಿಆರ್‌ಗೆ ಸೂಚನೆ: ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಿಂದ ಅಮಾನಿ ಗೋಪಾಲಕೃಷ್ಣ ಕೆರೆಗೆ ಹಾದು ಹೋಗುವ ರಾಜಕಾಲುವೆ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಿ.ಬಿ.ರಸ್ತೆಯಲ್ಲಿ ಕಾಂಕ್ರಿಟ್ ಡ್ರೈನೇಜ್ ನಿರ್ಮಾಣಕ್ಕೆ ಸೂಚಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಮುಟ್ಟದ ಜನರ ಅಹವಾಲು: ಚಿಕ್ಕಬಳ್ಳಾಪುರ ನಗರದಲ್ಲಿನ ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ತೊಂದರೆ ಅನುಭವಿಸುತ್ತಿರುವ ನಿವಾಸಿಗಳು ಸಿಎಂಗೆ ಮನವಿ ಸಲ್ಲಿಸಲು ಗಂಟೆಗಟ್ಟಲೇ ಕಾದರು. ತೀರಾ ತಡವಾಗಿ ಬಂದ ಸಿಎಂ ತರಾತುರಿಯಲ್ಲಿ ವೀಕ್ಷಣೆಗೆ ಮುಂದಾಗಿದ್ದರಿಂದ ಅಹವಾಲು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಸ್ಥಳೀಯ ಅಧಿಕಾರಿಗಳ ಎದುರು ಅಳಲು ತೋಡಿಕೊಂಡು ಸುಮ್ಮನಾದರು. ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಾನಿಯಾದ ಬೆಳೆಗಳ ವೀಕ್ಷಣೆ: ಶಿಡ್ಲಘಟ್ಟ ತಾಲೂಕಿನ ಆನೆಮಡಗುವಿನಲ್ಲಿ ಮಳೆಗೆ ಹಾನಿಯಾದ ರಾಗಿ, ಮುಸುಕಿನಜೋಳ, ಟೊಮ್ಯಾಟೋ, ನೆಲಗಡಲೆ, ರೇಷ್ಮೆ, ಎಲೆಕೋಸು, ಮೂಲಂಗಿ ಸೇರಿ ಬೆಳೆಗಳನ್ನು ಮುಖ್ಯಮಂತ್ರಿ ವೀಕ್ಷಿಸಿದರು. ತ್ವರಿತವಾಗಿ ಬೆಳೆ ಸಮೀಕ್ಷೆಯ ವರದಿ ಸಲ್ಲಿಸಲು ಜಂಟಿ ಕೃಷಿ ನಿರ್ದೇಶಕಿಗೆ ಸೂಚಿಸಿದರು.

ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೆ.ಮಿಥುನ್ ಕುಮಾರ್, ಜಿಪಂ ಸಿಇಒ ಪಿ. ಶಿವಶಂಕರ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net