ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಳ್ಳಿ, ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಮನವಿ, 2 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

mtb
Published on

ಬೆಂಗಳೂರು ಗ್ರಾಮಾಂತರ: ಕರೊನಾ ರೋಗ ಲಕ್ಷಣ ಕಂಡುಬಂದ ಕೂಡಲೇ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು. ಪರಿಸ್ಥಿತಿ ಕೈಮೀರುವವರೆಗೆ ಕಾಯಬಾರದು ಎಂದು ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಮನವಿ ಮಾಡಿದರು.

ಹೊಸಕೋಟೆ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಬುಧವಾರ 2 ಸಾವಿರ ಆಹಾರ ಕಿಟ್ ವಿತರಿಸಿ ಮಾತನಾಡಿದರು. ಕರೊನಾ ಸೋಂಕಿನ ಬಗ್ಗೆ ಜಾಗರೂಕರಾಗಿರಬೇಕು. ರೋಗ ಲಕ್ಷಣ ಕಂಡುಬಂದರೆ ಕೂಡಲೇ ತಪಾಸಣೆಗೊಳಗಾಗಬೇಕು. ಪರಿಸ್ಥಿತಿ ಕೈಮೀರಿದ ಬಳಿಕ ಎಚ್ಚೆತ್ತುಕೊಂಡರೆ ಪ್ರಯೋಜನವಿಲ್ಲ ಎಂದು ಹೇಳಿದರು.

ಮೆಡಿಕಲ್ ಶಾಪ್‌ಗಳಿಗೆ ಹೋಗಿ ಔಷಧ ತೆಗೆದುಕೊಳ್ಳುವುದರಿಂದ ಪ್ರಾಣಾಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಕರೊನಾ ಸೋಂಕಿಗೆ ಸಮರ್ಪಕವಾದ ಔಷಧದ ಕಿಟ್ ನೀಡಲಾಗುತ್ತಿದೆ. ವೈದ್ಯರ ಸಲಹೆ ಪಾಲಿಸಿದರೇ ಬೇಗ ಗುಣಮುಖರಾಗಬಹುದು ಎಂದರು.

ಲಾಕ್‌ಡೌನ್ ಕಾರಣದಿಂದ ಉದ್ಯೋಗವಿಲ್ಲದೆ ಸಾಕಷ್ಟು ಮಂದಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಂಘ, ಸಂಸ್ಥೆಗಳು, ದಾನಿಗಳು ಸಹಾಯಹಸ್ತ ಚಾಚಬೇಕು ಎಂದು ಮನವಿ ಮಾಡಿದರು.

ದಯವಿಟ್ಟು ಕರ್ತವ್ಯ ಬಿಡಬೇಡಿ; ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಜತೆಗೆ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆಗೆ ನಾವೆಲ್ಲ ಚಿರ ಋಣಿಯಾಗಿರಬೇಕು ಎಂದು ಸಚಿವ ಎಂಟಿಬಿ ಕೈಮುಗಿದು ಶ್ಲಾಘೀಸಿದರು.

ಕೆಲವು ಆಶಾ ಕಾರ್ಯಕರ್ತೆಯರಿಗೆ 3 ತಿಂಗಳಿಂದ ವೇತನ ನೀಡಿಲ್ಲ ಎಂಬ ವಿಷಯ ತಿಳಿದು ಬಂದಿದ್ದು, ಈ ಬಗ್ಗೆ ಸಿಎಂ ಅವರ ಗಮನಕ್ಕೆ ತಂದಿದ್ದೇನೆ. ಕೂಡಲೇ ವೇತನ ಪಾವತಿಯಾಗಲಿದೆ ಎಂದು ಭರವಸೆ ನೀಡಿ ಯಾವುದೇ ಕಾರಣಕ್ಕೂ ಕರ್ತವ್ಯ ನಿಲ್ಲಿಸಬೇಡಿ ನಿಮ್ಮ ಜತೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬಿದರು.

ಎಂಟಿಬಿ ಕಾರ್ಯಕ್ಕೆ ಮೆಚ್ಚುಗೆ: ಕಳೆದ ಬಾರಿಯ ಕರೊನಾ ಲಾಕ್‌ಡೌನ್ ಹಾಗೂ ಈಗಿನ ಲಾಕ್‌ಡೌನ್ ಸಂದರ್ಭದಲ್ಲಿ ಸಚಿವ ಎಂಟಿಬಿ ಅವರು ಪ್ರತಿನಿತ್ಯ ಹೊಸಕೋಟೆ ಕ್ಷೇತ್ರದ ಜನರ ದುಃಖ ದುಮ್ಮಾನಗಳಿಗೆ ಧ್ವನಿಯಾಗುತ್ತಿದ್ದಾರೆ. ಕರೊನಾ ಸಂಕಷ್ಟ ಸಮಯದಲ್ಲಿ ಹಿರಿಯಣ್ಣನಾಗಿ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಗೆ ಅಧಿಕಾರಿ ವರ್ಗಕ್ಕೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ನಿರ್ಗತಿಕರಿಗೆ ಬಡವರಿಗೆ ಕೂಲಿಕಾರ್ಮಿಕರ ಸಂಕಷ್ಟಕ್ಕೆೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸ್ಥಳೀಯರು ಅಭಿಮಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯೆಸಿದ ಎಂಟಿಬಿ, ನೀವೆ ನೀಡಿದ ಅಧಿಕಾರ. ನಿಮ್ಮೆಸೇವೆ ಮಾಡುವುದು ನನ್ನ ಕರ್ತವ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net