ಪರಿಸರವಾದಿಗಳಿಂದ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಗೆ ಹಿನ್ನಡೆ

4ANKOLA2B
Published on

ಅಂಕೋಲಾ: ಹಲವಾರು ಯೋಜನೆಗಳಿಗೆ ತ್ಯಾಗ ಮಾಡಿರುವ ಜಿಲ್ಲೆಯ ಜನರು ಉತ್ತಮ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಕೆಲವು ಪರಿಸರವಾದಿಗಳ ಕಾಟದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಪರ ಯೋಜನೆಗಳು ತಪ್ಪಿ ಹೋಗುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ಅತ್ಯಗತ್ಯ. ಈ ಮೂಲಕ ಹೋರಾಟ ನಿರಂತರವಾಗಿ ನಡೆಯಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಭಾನುವಾರ ರೈಲ್ವೆ ಸೇವಾ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ- ಅಂಕೋಲಾ ರೇಲ್ವೆ ಮಾರ್ಗದ ಅವಶ್ಯಕತೆ ಕುರಿತು ಸೆ. 12ರಂದು ನಡೆಯುವ ಅಧಿವೇಶನದಲ್ಲಿ ಪ್ರಸ್ತಾಪಿಸಿ ಮನವರಿಕೆ ಮಾಡುತ್ತೇನೆ ಎಂದರು.
ರೈಲ್ವೆ ಸೇವಾ ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಮಾತನಾಡಿ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗಾಗಿ ಹೋರಾಟ ನಡೆಸದಿದ್ದರೆ, ನಾವು ನಮ್ಮ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಹೋರಾಟದ ಮೂಲಕ ಸರ್ಕಾರದ ಮೇಲೆ ಒತ್ತಡ ತರಲು ನಿರ್ಧರಿಸಲಾಗಿದೆ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕಸಾಪ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ), ಪ್ರಮುಖರಾದ ಆರ್.ಟಿ. ಮಿರಾಶಿ, ಗೋಪು ನಾಯಕ ಅಡ್ಲೂರು, ಮೋಹನ ನಾಯಕ ಗೋಕರ್ಣ, ಶ್ರೀಧರ ನಾಯ್ಕ, ಡಾ.ವಿ.ಎನ್. ನಾಯಕ, ಎ.ಎಂ. ಮುಲ್ಲಾ, ರಾಮ ನಾಯ್ಕ, ವಸಂತ ನಾಯಕ, ಡಾ.ಎಸ್.ವಿ. ವಸ್ತ್ರದ, ರಾಜು ಹರಿಕಂತ್ರ, ಆರ್.ವಿ. ಕೇಣಿ, ಜಯಾ ನಾಯ್ಕ, ಉದಯ ನಾಯಕ, ಚಂದ್ರಶೇಖರ ನಾಯಕ ಭಾವಿಕೇರಿ, ಸಂದೀಪ ಜಿ. ಬಂಟ ಕೇಣಿ, ನಾಗಾನಂದ ಬಂಟ, ಪಾಂಡು ಗೌಡ ಸೇರಿದಂತೆ ನೂರಾರು ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು. ನಿವೃತ್ತ ಪ್ರಾಚಾರ್ಯ ಮಹೇಶ ಗೋಳಿಕಟ್ಟೆ, ವರದಿಗಾರ ಸುಭಾಶ ಕಾರೇಬೈಲ್, ನಿವೃತ್ತ ಶಿಕ್ಷಕ ವೆಂಟು ಮಾಸ್ತರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net