ಪರಿಸರದಿಂದಲೇ ಮಾನವನ ಉಳಿವು

nrp janapada
ಶೆಟ್ಟಿಕೊಪ್ಪದಲ್ಲಿ ಸಾಗರದ ಜಾನಪದ ಕಲಾವಿದ ಗುಡ್ಡೆಜೋಗಪ್ಪ ಅವರನ್ನು ಸನ್ಮಾನಿಸಲಾಯಿತು. ಅಶ್ವಿನಿ, ಸುನೀಲ್‌ಕುಮಾರ್, ಎ.ಬಿ.ಮಂಜುನಾಥ್, ಚಂದ್ರಶೇಖರ್, ವಾಣಿ, ಎನ್.ಎಂ.ಕಾಂತರಾಜ್, ಗೌಸ್ ಮೊಹಿಯುದ್ದಿನ್, ಅರುಣ್ ಬಾರಂಗಿ ಇದ್ದರು.
Published on

ಎನ್.ಆರ್.ಪುರ: ಪರಿಸರ ನಮ್ಮೆಲ್ಲರ ಜೀವನಾಡಿ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಗರದ ಗುಡ್ಡೆಜೋಗಪ್ಪ ಹೇಳಿದರು.

ಮಂಗಳವಾರ ಎನ್.ಆರ್.ಪುರ ಅರಣ್ಯ ಇಲಾಖೆಯಿಂದ ಶೆಟ್ಟಿಕೊಪ್ಪದ ಶ್ರೀ ಸಿದ್ಧಿ ವಿನಾಯಕ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಕಾಡಿನ ಬೆಂಕಿಯಿಂದಾಗುವ ಅನಾಹುತಗಳ ಬಗ್ಗೆ ಸಾಗರದ ಶ್ರೀ ಕಾಲಭೈರವ ಜೋಗಿ ತಂಡದವರಿಂದ ಜಾನಪದ ಗೀತ ಗಾಯನಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರಣ್ಯ ಸಂಪತ್ತನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಕಾಡಿನಲ್ಲಿ ಮನುಷ್ಯರ ಮೋಜು ಮಸ್ತಿಯಿಂದ, ಬೀಡಿ, ಸಿಗರೇಟ್ ಸೇದಿ ಬಿಸಾಕುವುದರಿಂದ, ಗದ್ದೆಗಳ ಅಂಚನ್ನು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಬೆಂಕಿ ಬೀಳಬಹುದು. ಇದರಿಂದ ಕಾಡಿನ ಜೀವರಾಶಿ ನಾಶವಾಗುತ್ತದೆ. ಇವುಗಳನ್ನೆಲ್ಲ ಮನುಷ್ಯ ಕಳೆದುಕೊಂಡರೆ ಮುಂದೊಂದು ದಿನ ಪರಿತಪಿಸಬೇಕಾಗುತ್ತದೆ. ಆದ್ದರಿಂದ ಕಾಡಿಗೆ ಬೆಂಕಿ ಬೀಳದ ಹಾಗೆ ನಾವೆಲ್ಲರೂ ಎಚ್ಚರ ವಹಿಸಬೇಕು. ಕಾಡಿಗೆ ಬೆಂಕಿ ಬೀಳದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಕೇವಲ ಅರಣ್ಯ ಇಲಾಖೆಯ ಕರ್ತವ್ಯವಲ್ಲ, ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದರು.

ಉಪ ವಲಯ ಅರಣ್ಯಾಧಿಕಾರಿ ಗೌಸ್ ಮೊಹಿಯುದ್ದೀನ್ ಮಾತನಾಡಿ, ಕಾಡಿಗೆ ಬೆಂಕಿ ಬೀಳದ ಹಾಗೆ ನೋಡಿಕೊಳ್ಳಲು ಅರಣ್ಯ ಇಲಾಖೆಯೊಂದಿಗೆ ರೈತರು, ಸಾರ್ವಜನಿಕರು ಕೈಜೋಡಿಸಬೇಕು. ಅರಣ್ಯ ಸಂಪತ್ತು ಮಾನವನ ಬದುಕಿಗೆ ನಿರಂತರವಾಗಿ ಬೇಕಾದುದು. ಕಾಡಿನ ಬೆಂಕಿ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದರು.

ಕಸಾಪ ಮಾಜಿ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಅಳಿವಿನಂಚಿನಲ್ಲಿರುವ ಜಾನಪದ ಕಲೆಯನ್ನು ಉಳಿಸಲು ಗುಡ್ಡೆಜೋಗಪ್ಪ ಅವರ ಶ್ರಮ ಮತ್ತು ಸೇವೆ ಶ್ಲಾಘನೀಯ. ಅರಣ್ಯ ಇಲಾಖೆ, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಜಾನಪದ ಗೀತ ಗಾಯನದ ಮೂಲಕ ಜಾಗೃತಿ ಮೂಡಿಸುತ್ತಿರುವ ಇವರ ಕಾರ್ಯ ಮೆಚ್ಚುವಂತಹದ್ದು ಎಂದರು.

ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ವಾಣಿ ನರೇಂದ್ರ, ಚಂದ್ರಶೇಖರ್, ಎ.ಬಿ.ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ಅರುಣ್ ಬಾರಂಗಿ, ಅಕ್ಷತಾ, ವನಪಾಲಕರಾದ ಮಂಜಯ್ಯ, ಸತೀಶ್, ರಾಘವೇಂದ್ರ, ಶಂಕರ್, ಲೋಹಿತ್ ಮತ್ತು ಶಾಲಾ ಮಕ್ಕಳು, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net