

ಚಿಕ್ಕಬಳ್ಳಾಪುರ: ಪ್ರತಿಯೊಬ್ಬರೂ ಸ್ವಚ್ಛತೆ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸಬೇಕು ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಸಲಹೆ ನೀಡಿದರು. ತಾಲೂಕಿನ ನಂದಿ ಗಿರಿಧಾಮದಲ್ಲಿ ಜಿಲ್ಲಾಡಳಿತ, ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯು ಕಾರ್ಮಿಕರ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ನಂದಿ ಗಿರಿಧಾಮ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಗಿರಿಧಾಮವು ಪ್ರಾಕೃತಿಕ ಸೊಬಗಿನ ವಾತಾವರಣದಿಂದ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿನ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದಾಗ ಮತ್ತಷ್ಟು ಗಮನ ಸೆಳೆಯುತ್ತದೆ. ಇಲ್ಲಿ ಉತ್ತಮ ಸ್ವಚ್ಛತೆ ನಿರ್ವಹಣೆ ವ್ಯವಸ್ಥೆ ಇರಬೇಕು. ಪ್ರವಾಸಿಗರು ಬಳಸುವ ನೀರಿನ ಬಾಟಲ್, ಇತರ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ಬುಟ್ಟಿಗೆ ಹಾಕಬೇಕು ಎಂದರು.
ಸ್ವಚ್ಛತಾ ಕಾರ್ಯ ಕೇವಲ ಪೌರಕಾರ್ಮಿಕರಿಗೆ ಸೀಮಿತವಾಗಿಲ್ಲ. ಆಯಾ ವ್ಯಾಪ್ತಿಯ ಪ್ರತಿಯೊಬ್ಬರೂ ತ್ಯಾಜ್ಯ ತೆರವುಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಹಾಗೆಯೇ ಇತರರನ್ನು ಪ್ರೋತ್ಸಾಹಿಸಬೇಕು. ಆಗ ಮಾತ್ರ ಒಳ್ಳೆಯ ನೈರ್ಮಲ್ಯ ವಾತಾವರಣ ನಿರ್ಮಿಸಲು ಸಾಧ್ಯ ಎಂದರು.
ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಬಹುತೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅನೇಕರು ಪ್ಲಾಸ್ಟಿಕ್ ಬಾಟಲ್, ಕೈ ಚೀಲ ಸೇರಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವ ಮನೋಭಾವ ಪ್ರದರ್ಶಿಸುತ್ತಿದ್ದಾರೆ. ಇದರಿಂದ ನಿರ್ಮಾಣವಾಗುತ್ತಿರುವ ಅನೈರ್ಮಲ್ಯಕ್ಕೆ ಇತರರು ಬೇಸರಪಟ್ಟುಕೊಳ್ಳುವಂತಾಗಿದೆ ಎಂದರು. ಸ್ವಚ್ಛತಾ ಕಾರ್ಯವು ಪ್ರತಿನಿತ್ಯದ ಚಟುವಟಿಕೆಯಾಗಬೇಕು. ಸಂಘ-ಸಂಸ್ಥೆಗಳು, ಶಾಲಾ ವಿದ್ಯಾರ್ಥಿಗಳು ರಜೆ ದಿನಗಳಲ್ಲಿ ಸಮೀಪದ ಜನಾಕರ್ಷಣೆಯ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಭಿಯಾನಕ್ಕೆ ಮೊದಲು ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಎಸಿ ಸಂತೋಷ್ ಕುಮಾರ್, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್ ಮತ್ತಿತರರು ಇದ್ದರು.
16 ತಂಡಗಳ ಸ್ವಚ್ಛತಾ ಕಾರ್ಯ: ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜು, ಕೆ.ವಿ.ಎಜುಕೇಷನ್ ಾರ್ಮಸಿ, ಐಟಿಐ, ದೈಹಿಕ ಶಿಕ್ಷಣ ತರಬೇತಿ ಸಂಸ್ಥೆ ಸೇರಿ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು. ಯೋಗಾನಂದೀಶ್ವರ ದೇವಾಲಯ, ಗಾಂಧಿ ನಿಲಯ, ನೆಹರೂ ನಿಲಯ, ಮಕ್ಕಳ ಆಟದ ಉದ್ಯಾನ, ವಸತಿ ನಿಲಯ, ವಾಹನ ನಿಲುಗಡೆ ಸ್ಥಳದ ಜತೆಗೆ 16 ಸ್ಥಳಗಳಿಗೆ ವಿದ್ಯಾರ್ಥಿಗಳ ತಂಡಗಳನ್ನು ರಚಿಸಲಾಗಿತ್ತು. ಮಾರಕ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ತೆಗೆದು ಸೂಕ್ತ ವಿಲೇವಾರಿಗೊಳಿಸಲಾಯಿತು. ಇದಕ್ಕೆ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಎನ್ನದೇ ಜಿಲ್ಲಾಮಟ್ಟದ ಅಧಿಕಾರಿಗಳು, ಪೌರಕಾರ್ಮಿಕರು, ವಿವಿಧ ಇಲಾಖೆಯ ಸಿಬ್ಬಂದಿ ಸಾಥ್ ನೀಡಿದರು.