ಪರಿಸರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ

15 HANUR 1
Published on

ಹನೂರು: ಪರಿಸರವನ್ನು ಉಳಿಸಿ, ಬೆಳೆಸುವುದರ ಜತೆಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ತಾಲೂಕಿನ ಎಂ.ಜಿ ದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಕೃಷಿ ಇಲಾಖೆ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಜಲಾನಯನ ಯಾತ್ರೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹನೂರು ಭಾಗದಲ್ಲಿ ಕೃಷಿ ರೈತರ ಜೀವಾಳ. ಹೆಚ್ಚಿನ ರೈತರು ಕೃಷಿಯಲ್ಲಿ ತೊಡಗಿದ್ದಾರೆ. ಈ ಹಿಂದೆ ಉತ್ತಮ ಮಳೆಯಾಗುತ್ತಿತ್ತು. ಇದರಿಂದ ಉತ್ತಮ ವಾತಾವರಣವನ್ನು ಹೊಂದುವುದರ ಜತೆಗೆ ಕೃಷಿಗೆ ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ಮಾನವನ ಸ್ವಾರ್ಥದಿಂದ ಅರಣ್ಯ ಪ್ರದೇಶ ಹಾಗೂ ಪರಿಸರ ನಾಶವಾಗುತ್ತಿದೆ. ಇದರಿಂದ ವಾತಾವರಣದ ವೈಪರೀತ್ಯದಿಂದಾಗಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಕೃಷಿಗೆ ತೊಡಕಾಗಿ ಪರಿಣಮಿಸಿದೆ.

ಈ ದೆಸೆಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು. ಜಮೀನುಗಳಲ್ಲಿ ಇಂಗುಗುಂಡಿಯನ್ನು ನಿರ್ಮಿಸುವುದರ ಮೂಲಕ ನೀರನ್ನು ಸಂಗ್ರಹಿಸಿ ಕೃಷಿಗೆ ಬಳಕೆ ಮಾಡಿಕೊಳ್ಳಬೇಕು. ವ್ಯರ್ಥವಾಗುವುದನ್ನು ತಡೆಗಟ್ಟಬೇಕು. ಮರ, ಗಿಡಗಳನ್ನು ಬೆಳೆಸುವುದರ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು. ಜತೆಗೆ ಕೃಷಿ ಇಲಾಖೆಯಿಂದ ದೊರಕುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ಬಗ್ಗೆ ಇತರರಿಗೂ ತಿಳಿಸಬೇಕು. ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.

ನೀರಾವರಿಗೆ ಹೆಚ್ಚಿನ ಆದ್ಯತೆ: ಹನೂರು ಕ್ಷೇತ್ರವು ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. ಆದರೆ ಅಭಿವೃದ್ಧಿ ಕಂಡಿಲ್ಲ. ಮೂಲಸೌಕರ್ಯಗಳ ಇದೆ. ಈ ದೆಸೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈಗಾಗಲೇ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ಬಗ್ಗೆ ಕ್ರಮವಹಿಸಲಾಗಿದೆ. ಇನ್ನು ರೈತರಿಗೆ ಸಮರ್ಪಕವಾಗಿ ನೀರಾವರಿ ಸೌಕರ್ಯವನ್ನು ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಸಂಬಂಧ ಈಗಾಗಲೇ ಯೋಜನೆಯನ್ನು ರೂಪಿಸಲಾಗಿದ್ದು, ಅನುಷ್ಠಾನಕ್ಕಾಗಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ನೀರು ಸಂರಕ್ಷಣೆ ಸಂಬಂಧ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಗ್ರಾಪಂ ಸದಸ್ಯರಾದ ರಾಯಪ್ಪ, ಚಿನ್ನವೆಂಕಟ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಸುಷ್ಮಾ, ತಾಲೂಕು ಸಹಾಯಕ ನಿರ್ದೇಶಕ ರಂಗಸ್ವಾಮಿ, ಕೃಷಿ ಅಧಿಕಾರಿಗಳಾದ ಮನೋಹರ್, ನಾಗೇಂದ್ರ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜೇಶ್, ಮುಖಂಡರಾದ ಪ್ರಭುಸ್ವಾಮಿ, ವಿವೇಕಾನಂದ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net