

ಆನೇಕಲ್: ಪರಿಸರ ರಕ್ಷಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿದಿನ ಪರಿಸರ ರಕ್ಷಣೆಗೆ ಕೈಲಾದ ಕೊಡುಗೆ ನೀಡಬೇಕು ಎಂದು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್ ಹೇಳಿದರು.
ಬೊಮ್ಮಸಂದ್ರ ಕೈಗಾರಿಕಾ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬೊಮ್ಮಸಂದ್ರ ಕೈಗಾರಿಕಾ ಸಂಘ ಕರ್ನಾಟಕದಲ್ಲಿ ಅತಿ ಹಳೆಯ ಕೈಗಾರಿಕಾ ಪ್ರದೇಶ. ಅಂದಾಜು 2500 ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧೀನದಲ್ಲಿವೆ ಎಂದರು.
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ದೇಶವೇ ನೋಡುವ ರೀತಿ ಅಭಿವೃದ್ಧಿ ಹೊಂದಿದೆ. ಎಲ್ಲ ಮಾದರಿ ಸಂಸ್ಥೆಗಳನ್ನು ಹೊಂದಿದೆ. ಜತೆಗೆ ಉತ್ತಮ ಸೌಕರ್ಯ ಕಲ್ಪಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಬ್ಬಗೋಡಿ ಪೊಲೀಸರಿಗೆ ಗಸ್ತು ವಾಹನ ನೀಡುವುದು ಸೇರಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಬೆಂಗಳೂರು ಮಾಲಿನ್ಯ ಮಂಡಳಿ ಆದೇಶದಂತೆ ಕೈಗಾರಿಕಾ ಪ್ರದೇಶಗಳಿಂದ ಮಾಲಿನ್ಯ ಆಗದಂತೆ ಎಚ್ಚರವಹಿಸಲಾಗಿದೆ. ವಿಶ್ವ ಪರಿಸರ ದಿನದ ಅಂಗವಾಗಿ ಈ ವ್ಯಾಪ್ತಿಯಲ್ಲಿ ಹತ್ತು ಸಾವಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಸಾಂಕೇತಿಕವಾಗಿ ಗಿಡ ನೆಡಲಾಗಿದೆ ಎಂದರು.
ಪರಿಸರ ಮಾಲಿನ್ಯ ಮಂಡಳಿ ಬೊಮ್ಮಸಂದ್ರ ಅಧಿಕಾರಿ ಮಂಜುನಾಥ್ ಮಾತನಾಡಿ, ಈ ಭಾಗದ ಕಂಪನಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸ್ವಚ್ಛ ಮಾಡಿ, ನಂತರ ಹೊರಕ್ಕೆ ಬಿಡಲಾಗುತ್ತಿದೆ. ಯಾವುದೇ ರೀತಿ ಮಾಲಿನ್ಯವಾಗದಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಸಂಘದ ಖಜಾಂಚಿ ಸಂಜೀವ್ ಸಾವಂತ್ ಮಾತನಾಡಿ, ಪ್ರತಿ ಕಂಪನಿಗಳಿಗೂ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ಸಂಘದಿಂದ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಕೈಗಾರಿಕಾ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು. ಇದಕ್ಕೆ ಸ್ಥಳೀಯ ಕಂಪನಿಗಳ ಸಹಾಯ ಪಡೆದು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಸಂಘ ಬೊಮ್ಮಸಂದ್ರ ಕೆರೆಯ ಅಭಿವೃದ್ಧಿಗಾಗಿ ಶಾಲಾ-ಕಾಲೇಜುಗಳು, ಆಸ್ಪತ್ರೆಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಬೊಮ್ಮಸಂದ್ರ ಪುರಸಭೆ ಸಹಕಾರ ಪಡೆದು ಅಭಿವೃದ್ಧಿ ಪಡಿಸಿ, 60 ಲಕ್ಷ ರೂ.ವೆಚ್ಚದಲ್ಲಿ ಬೊಮ್ಮಸಂದ್ರ ಕೈಗಾರಿಕಾ ಸಂಘದಿಂದ ಕ್ರೀಡಾಂಗಣ ನಿರ್ಮಾಣ ಮಾಡಿ ಕ್ರೀಡೆಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಂಟಿ ಕಾರ್ಯದರ್ಶಿ ಮುರಳಿಧರ್, ಕಾರ್ಯದರ್ಶಿ ನರೇಂದ್ರ ಕುಮಾರ್, ಜಂಟಿ ಖಜಾಂಚಿ ರಾಜಶೇಖರ್ ಪಾಟೀಲ್, ಎಕ್ಸಿಕ್ಯೂಟಿವ್ ಮೆಂಬರ್ ಜಿ. ಚಂದ್ರಶೇಖರ್, ವ್ಯವಸ್ಥಾಪಕ ಶಿವಕುಮಾರ್, ಎಕ್ಸಿಕ್ಯೂಟಿವ್ ಮೆಂಬರ್‌ಗಳಾದ ನೀಲಕಂಠಯ್ಯ, ನಾಗರಾಜ್ ಶೆಟ್ಟಿ, ಮಧುಸೂದನ್, ಶಶಿಕಿರಣ್, ಮಲ್ಲಿಕಾರ್ಜುನ್,ಜನಾರ್ದನ್, ವಾಸು ಮತ್ತಿತರರು ಇದ್ದರು.