

ಕುಶಾಲನಗರ: ಸಮೀಪದ ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು ಘಟಕ ಹಾಗೂ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ದೀಪಾವಳಿ ಆಚರಿಸಲಾಯಿತು.
ಶಾಲಾ ಆವರಣದಲ್ಲಿ ರಂಗೋಲಿಯ ಚಿತ್ತಾರದೊಂದಿಗೆ ಮಣ್ಣಿನ ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರು. ಪರಿಸರ ಸ್ನೇಹಿ ದೀಪಾವಳಿ ಆಚರಿಸುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕ್ರತ ಶಿಕ್ಷಕ ಕೂಡುಮಂಗಳೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಮುಖ್ಯಶಿಕ್ಷಕಿ ಎಚ್.ಎಸ್. ಸುಜಾತಾ ಮಾತನಾಡಿ, ದೀಪಾವಳಿ ಹಬ್ಬದ ಸಂದರ್ಭ ಮಾಲಿನ್ಯಕಾರಕ ಪಟಾಕಿ ಸಿಡಿಸದೆ ದೀಪ ಬೆಳಗಿಸುವ ಮೂಲಕ ಹಸಿರು ದೀಪಾವಳಿ ಆಚರಿಸಬೇಕಿದೆ ಎಂದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಶಿಕ್ಷಕಿಯರಾದ ಭಾರತಿ, ಭೋಜಮ್ಮ, ಉಷಾ, ಗೀತಾ ರಾಣಿ, ರಶ್ಮಿ ಇದ್ದರು.
ವಿದ್ಯಾರ್ಥಿಗಳು ಭಿತ್ತಿಪತ್ರಗಳನ್ನು ಹಿಡಿದು ಪರಿಸರ ಜಾಗೃತಿ ಮೂಡಿಸಿದರು. ಹಣತೆ ಬೆಳಗಿಸಿ ದೀಪಾವಳಿ ಆಚರಿಸಿ, ಪಟಾಕಿ ತ್ಯಜಿಸೋಣ ಮಾಲಿನ್ಯ ತಡೆಯೋಣ, ಮಾಲಿನ್ಯ ಮುಕ್ತ ದೀಪಾವಳಿ ಆಚರಿಸೋಣ ಬನ್ನಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.