

ಬಳ್ಳಾರಿ : ಪಿಒಪಿ ಮತ್ತು ರಾಸಾಯನಿಕಯುಕ್ತ ಬಣ್ಣ ಲೇಪಿತ ಗಣೇಶ ಮೂರ್ತಿ ಪ್ರತಿಷ್ಠಾಪಿಸದೆ, ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಕರೆ ನೀಡಿದರು.
ನಗರದ ಅರಣ್ಯ ಇಲಾಖೆಯ ಪ್ರಕೃತಿ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಎರಡು ದಿನಗಳ ಪರಿಸರ ಸ್ನೇಹಿ ಗಣೇಶ ಮೂರ್ತಿ ರಚನಾ ಕಾರ್ಯಾಗಾರದಲ್ಲಿ ಮಾತನಾಡಿದರು. ಭೂಮಿ ಮೇಲೆ ಮನುಷ್ಯ ಸೇರಿದಂತೆ ಎಲ್ಲ ಜೀವಿಗಳು ಸಮೃದ್ದಿಯಾಗಿ ಜೀವಿಸಲು ಗಾಳಿ, ನೀರು, ಆಹಾರ ಮೂಲಭೂತವಾಗಿ ಬೇಕು, ಇದೆಲ್ಲವನ್ನು ನಮಗೆ ನೀಡುವ ಪರಿಸರದ ಸಂರಕ್ಷಣೆ ಅತ್ಯಗತ್ಯವಾಗಿದೆ. ಪರಿಸರದಲ್ಲಿ ಅನೈರ್ಮಲ್ಯತೆ ಕಡಿಮೆ ಮಾಡಲು ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸೋಣ ಎಂದು ಹೇಳಿದರು.
ಪಿಒಪಿ, ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ, ಬಾವಿ ಹಾಗೂ ಕಾಲುವೆಗಳಿಗೆ ವಿಸರ್ಜಿಸುವುದರಿಂದ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಭೌತಿಕ ಹಾಗೂ ರಾಸಾಯನಿಕ ಗುಣ ಮಾರ್ಪಟ್ಟು ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಿಗಳು ಮತ್ತು ಸಾರ್ವಜನಿಕರಢ ಆರೋಗ್ಯದ ಮೇಲೂ ಕ್ಕೂ ಅಪಾಯವಾಗಲಿದೆ ಎಂದರು.
ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಮಾತನಾಡಿ, ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ, ಪ್ಲಾಸ್ಟಿಕ್ ಮುಕ್ತ ಪರಿಸರ ರಕ್ಷಣೆ ಮಾಡುವ ಜತೆಗೆ ಮನೆ ಮುಂದೆ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು. ಸಾರ್ವಜನಿಕವಾಗಿ ನಡೆಸುವ ಗಣೇಶ ಮೂರ್ತಿಯ ಉತ್ಸವಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು ಎಂದರು. ಇದೇ ವೇಳೆ ಮಕ್ಕಳು ಮಣ್ಣಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಸಂಭ್ರಮಿಸಿದರು.