ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಆದ್ಯತೆ ನೀಡಿ

21 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾನೊಬ್ಬ ಬದಲಾದರೆ ಪರಿಸರದ ಉಳಿವು ಸಾಧ್ಯವೇ ಎಂಬ ಅಸಡ್ಡೆ ಬೇಡ. ಪರಿಸರದ ಸಮತೋಲನದಲ್ಲಿ ಎಲ್ಲರೂ ಕೈ ಜೋಡಿಸಬೇಕು. ನಾನು ಸರಿಯಾದರೆ, ನನ್ನ ಆಚರಣೆಗಳು ಪರಿಸರ ಸ್ನೇಹಿಯಾದರೆ ಬದಲಾವಣೆ ಸಾಧ್ಯ ಎಂದು ಪರಿಸರ ಪ್ರೇಮಿ ಡಾ. ಸಂಜೀವ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದ ಹು-ಧಾ ನಾಗರಿಕ ಪರಿಸರ ಸಮಿತಿ ಹಾಗೂ ಕೆಪಿಇಎಸ್ ವಿದ್ಯಾ ಸಂಸ್ಥೆ ವತಿಯಿಂದ ಇಲ್ಲಿನ ಕೆಪಿಇಎಸ್ ಸಂಸ್ಥೆ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪರಿಸರ ಸ್ನೇಹಿ ಗಣೇಶಹಬ್ಬದ ಆಚರಣೆ ಕುರಿತು ತಿಳಿವಳಿಕೆ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತಿಕ ಸಮಸ್ಯೆಗಳಿಗೆ ನಮ್ಮಿಂದ ಪರಿಹಾರ ಸಾಧ್ಯವಿದೆ. ನಮ್ಮ ಜೀವನಶೈಲಿ ಬದಲಾಗಲಿ. ಹಬ್ಬಗಳನ್ನು ಪರಿಸರ ಸ್ನೇಹಿ ಆಚರಣೆ ಗೊಳಿಸುವುದರ ಮೂಲಕ ಪರಿಸರ ರಕ್ಷಣೆಯಲ್ಲಿ ನಮ್ಮ ಕೊಡುಗೆ ಸಾಧ್ಯವಿದೆ. ಗಣೇಶ ಚತುರ್ಥಿ ಸೃಜನಶೀಲ ಹಬ್ಬ. ಆದರೆ ಅದು ಪರಿಸರ ಸ್ನೇಹಿಯಾಗಿದ್ದರೆ ಇನ್ನು ಚೆಂದ. ಹಬ್ಬಗಳನ್ನ ವಿಕಾರ ಗೊಳಿಸುವುದು ಬೇಡ ಎಂದು ಸಲಹೆ ನೀಡಿದರು.
ಡಾ. ಲಿಂಗರಾಜ ರಾಮಾಪುರ ಮಾತನಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೂ ನಾವು ಪರಿಸರದ ಮೇಲಿನ ಒತ್ತಡ ಹೆಚ್ಚಿಸುತ್ತಿದ್ದೇವೆ. ಗಣಪತಿ ಗಾತ್ರ, ರಚನೆ ,ಬಣ್ಣ ಎಲ್ಲವೂ ಪರಿಸರದ ಮೇಲೆ ಪ್ರಭಾವ ಬೀರುತ್ತಿದೆ. ಗುಲಾಲು ಎರಚುವಿಕೆ, ಪ್ಲಾಸ್ಟಿಕ್ ಹೂವು, ಅಲಂಕಾರಿಕ ವಸ್ತುಗಳು ಬೇಡ. ಹಬ್ಬ ಪರಿಸರ ಸ್ನೇಹಿ ಆಗಿರಲಿ. ಹಬ್ಬದ ನೆಪದಲ್ಲಿ ನಮ್ಮ ನೆಲ, ಜಲ ವಾಯುಮಾಲಿನ್ಯ ಮಾಡುವುದು ಸರಿಯಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿದರು. ಮಕ್ಕಳಿಗೆ ಪರಿಸರಸ್ನೇಹಿ ಗಣೇಶ ಹಬ್ಬದ ಆಚರಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಡಾ. ಸಂಜೀವ ಪಾಟೀಲ, ಬಸವರಾಜ ಕಪಲಿ, ಭಾಗೀರಥಿ ಕೆ., ಶ್ರೀನಿವಾಸ ಪಾಟೀಲ, ಶಿವಾನಂದ ಭಾವಿಕಟ್ಟಿ, ಇತರರು ಇದ್ದರು.
ಕೆ.ಎಚ್. ನಾಯಕ ಸ್ವಾಗತಿಸಿದರು. ಡಾ. ವಿಲಾಸ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಋತಿಕಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಯೊಗೀತಾ ಮೋರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net