

ಕೋಲಾರ: ದೇಶದ ರಕ್ಷಣೆಗೆ ಸೈನಿಕರು ಕರ್ತವ್ಯ ನಿರ್ವಹಿಸುವಂತೆಯೇ ಅರಣ್ಯ, ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಪಾತ್ರವು ಪ್ರಮುಖವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಹೇಳಿದರು.
ಮಗರದ ಅರಣ್ಯ ವಿಭಾಗ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿ ತ್ಯಾಗ ಮಾಡಿದಂತಹ ಹಲವು ಸಿಬ್ಬಂದಿ ಹೆಸರುಗಳು ರಾಜ್ಯ ಅರಣ್ಯ ಇಲಾಖೆಯಲ್ಲಿ ಇಂದಿಗೂ ಹಚ್ಚ ಹಸಿರಾಗಿ ರಾರಾಜಿಸುತ್ತಿವೆ. ಅರಣ್ಯ, ವನ್ಯಜೀವಿ ಸಂರಕ್ಷಣೆಗೆ ಅವರು ನಡೆಸಿದ ಪ್ರಯತ್ನ, ಅವರ ಧೈರ್ಯ, ಸಹಸ ಜನತೆ ಎಂದಿಗೂ ಮರೆಯುವುದಿಲ್ಲ. ನೈಸರ್ಗಿಕ ಸಂಪನ್ಮೂಲ ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಅವರ ಪ್ರಾಣವನ್ನೇ ಮುಡಿಪಾಗಿಟ್ಟು ಹುತಾತ್ಮರಾದರು ಎಂದರು.
ಸೆ.೧೧ರಂದು ಜೋಧಪುರನ್ ಮಹಾರಾಜ ಅಭಯ್ ಸಿಂಗ್ ಹೊಸ ಅರಮನೆ ನಿರ್ಮಾಣಕ್ಕೆ ಕೆಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ಮುಂದಗುತ್ತಾನೆ. ಆಗ ಇದನ್ನು ವಿರೋಧಿಸಿದ ಬಿಷ್ಣೋಯಿ ಸಮುದಾಯದ ೩೬೩ ಪುರುಷ, ಮಹಿಳೆ ಮತ್ತು ಮಕ್ಕಳು ಸೇರಿದಂತೆ ಮುಗ್ಧ ಪರಿಸರ ಪ್ರೇಮಿಗಳನ್ನು ಸೈನಿಕರು ಹತ್ಯೆಗೈದರು. ಈ ಸಮುದಯದ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಕೇಂದ್ರ ಸರ್ಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅರಣ್ಯ ನಾಶವಾಗುತ್ತಿದ್ದು, ಅದರ ಪರಿಣಾಮ ಹವಾಮಾನ ವೈಪರಿತ್ಯದಿಂದ ಮಳೆ ಕಡಿಮೆಯಾಗುತ್ತಿದೆ. ಅದರಿಂದ ಮಾನವನ ಆರೋಗ್ಯದ ಮೇಲೆ ಬಹು ದೊಡ್ಡ ಪರಿಣಾಮ ಬೀರುತ್ತದೆ. ಡಾ.ರಾಜಕುಮಾರ್ ಅವರ ಗಂಧದಗುಡಿ ಸಿನಿಮಾ ಅರಣ್ಯ ಉಳಿಸಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಪ್ರಥಮ ದರ್ಜೆ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶ ಶ್ರೀನಿವಾಸ್ ಎಸ್. ಪಾಟೀಲ್, ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾಬಸಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ಮತ್ತಿತರರು ಉಪಸ್ಥಿತರಿದ್ದರು.