

ಚಾಮರಾಜನಗರ: ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗೆ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕಿದೆ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್.ಋಗ್ವೇದಿ ತಿಳಿಸಿದರು.
ನಗರದ ಜೈ ಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂಥ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪ್ರಾಣಿ ಕಲ್ಯಾಣ ದಿನ ಕಾರ್ಯಕ್ರಮದಲ್ಲಿ ಕೈಪಿಡಿಯನ್ನು ವಿತರಿಸಿ ಮಾತನಾಡಿದರು.
ಪ್ರಾಣಿಗಳ ಸಂರಕ್ಷಣೆಯಿಂದ ಪ್ರಕೃತಿಯ ಸಮತೋಲನ ಉಂಟಾಗಿ, ಮಾನವನ ಬದುಕು ಉನ್ನತವಾಗಿ ಸಾಗಲು ಸಹಾಯಕವಾಗುತ್ತದೆ. ಮಾನವ ಪ್ರಾಣಿಗಳ ಸಂಘರ್ಷ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಆದರೂ ಅನಿವಾರ್ಯವಾಗಿ ಪ್ರಾಣಿಗಳ ಬಗ್ಗೆ ನಾವು ಪ್ರೀತಿ ಗೌರವ ಇಟ್ಟುಕೊಳ್ಳಬೇಕು. ಪ್ರಾಣಿಗಳಿಗೆ ಯಾವುದೇ ತೊಂದರೆ ನೀಡುವ ಕಾರ್ಯ ಮಾಡಬಾರದು. ಈ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದರು.
ಜಿಲ್ಲೆ ವಿಶೇಷವಾಗಿ ಹುಲಿ, ಆನೆ ,ಜಿಂಕೆ ಹಾಗೂ ನೂರಾರು ಪ್ರಾಣಿ ಪಕ್ಷಿಗಳ ಸಮೃದ್ಧಿಯಾದ ವನ್ಯ ಸಂಕುಲವನ್ನು ಹೊಂದಿದೆ. ಅರಣ್ಯ ಪ್ರದೇಶಗಳು ಪ್ರಾಣಿಗಳು ಬದುಕಲು ಸುರಕ್ಷಿತವಾದ ಪ್ರದೇಶವಾಗಿದೆ. ವಿದ್ಯಾರ್ಥಿಗಳು ಪ್ರಾಣಿ ಪಕ್ಷಿಗಳ ಬಗ್ಗೆ ವಿಶೇಷ ಕುತೂಹಲವನ್ನು ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ನಮ್ಮ ಸಂಪೂರ್ಣ ಪ್ರೋತ್ಸಾಹವನ್ನು ನೀಡಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಬಿ.ಕೆ.ಆರಾಧ್ಯ ಮಾತನಾಡಿ, ವಿಶ್ವ ಪ್ರಾಣಿ ಕಲ್ಯಾಣ ದಿನ ಅ.4ರಂದು ಎಲ್ಲೆಡೆ ಆಚರಿಸುವ ಮೂಲಕ ಅದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಾಗರಿಕರಾದ ರಾಜಗೋಪಾಲ್ ಮುರುಗೇಶ್, ರವಿ ಶ್ರಾವ್ಯ, ರಾಮು ಹಾಗೂ ಇತರರು ಹಾಜರಿದ್ದರು.