

ಕಾನಹೊಸಹಳ್ಳಿ: ಪ್ರಸುತ್ತ ದಿನಮಾನಗಳಲ್ಲಿ ನೈಸರ್ಗಿಕ ವಿಕೋಪಗಳು ನಡೆಯುತ್ತಿದ್ದು, ಪರಿಸರದಲ್ಲಿನ ಅಸಮತೋಲನ ಇದಕ್ಕೆ ಕಾರಣವಾಗಿದೆ. ಪರಿಸರ ಸಂರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಸಾವಯವ ಕೃಷಿಕ ಹುಲಿಕೆರೆ ಎಚ್.ವಿ.ಸಜ್ಜನ್ ತಿಳಿಸಿದರು.
ಕೆಂಚಮಲ್ಲನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಕಲಿಯಬೇಕು. ಪರಿಸರ ಸಂರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದರು.
ಕೃಷಿಯೆಡೆಗೆ ಒಲವು ಹೊಂದಬೇಕು. ಶಿಕ್ಷಣದ ಕಲಿಕೆ ನೌಕರಿಗಾಗಿ ಎಂಬಂತಾಗಿದೆ. ಹೀಗಾಗಿ, ಸಾಕಷ್ಟು ಜನರು ಕೃಷಿಯಿಂದ ವಿಮುಖರಾಗುತ್ತಿರುವುದು ವಿಪರ್ಯಾಸ. ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸುವ ನೈಸರ್ಗಿಕ, ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಎಚ್.ವಿ.ಸಜ್ಜನ್ ತಿಳಿಸಿದರು.
ಎಎಸ್‌ಐ ಎಸ್.ಕೆ.ಜಿಲಾನ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಕಾರಾತ್ಮಕ ಚಿಂತನೆ, ಸಮಾಜದ ಒಳಿತಿನ ಆಲೋಚನೆ, ಗುರಿ ತಲುಪುವ ಛಲ ಹೊಂದಬೇಕು. ತಂದೆ, ತಾಯಿ, ಗುರು-ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಪೊಲೀಸ್ ರಕ್ಷಣೆ ಬೇಕಾದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಮೊಬೈಲ್‌ನಿಂದ ದೂರವಿದ್ದು, ಉತ್ತಮ ಹವ್ಯಾಸಗಳಲ್ಲಿ ತೊಡಗಬೇಕೆಂದರು.
ಉಪವಲಯ ಅರಣ್ಯಾಧಿಕಾರಿ ಕೆ.ಎಂ.ಮಧುಸೂದನ್, ವಿಜಯನಗರ ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್.ಎಂ.ಹುಲಿಬಂಡಿ, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ವರಕನಹಳ್ಳಿ ಕೊಟ್ರೇಶ್, ಶಿಕ್ಷಕ ಡಾ.ಎ.ಕರಿಬಸಪ್ಪ, ಸಿಆರ್‌ಪಿ ಜಿ.ಟಿ.ಸಿದ್ದೇಶ್, ಎಸ್ಡಿಎಂಸಿ ಅಧ್ಯಕ್ಷ ಕೆ.ಗುರುಮೂರ್ತಿ, ಗ್ರಾಪಂ ಸದಸ್ಯರಾದ ಎಸ್.ಶಂಕ್ರಪ್ಪ, ವೈ.ಪೆನ್ನಪ್ಪ, ಕೆ.ಜಿ.ಶಿವಮೂರ್ತಿ, ಕೆ.ಎಂ.ಕಾವ್ಯಾ ಶಿವಕುಮಾರ್, ಪ್ರಮುಖರಾದ ಶಾಂತನಹಳ್ಳಿ ಶರಣಪ್ಪ, ಕೆ.ಜಿ.ಬಸವರಾಜ, ಸಣ್ಣತಮ್ಮಪ್ಪರ ಸುರೇಶ್, ಓಬಳೇಶ್, ಎಸ್ಡಿಎಂಸಿ ಸದಸ್ಯರಾದ ಸುಲ್ತಾನಪುರ ದಾದಾವಲಿ, ಜ್ಯೋತಿ ಜಾತಪ್ಪ, ಎಸ್.ಮಹಾಂತೇಶ್, ಶಿಕ್ಷಕರಾದ ಟಿ.ತಿಪ್ಪೇಸ್ವಾಮಿ, ಎನ್.ಚನ್ನಬಸವಣ್ಣ, ಕೆ.ಎಸ್.ಹರ್ಷವರ್ಧನ್, ಕೆ.ರವಿಕುಮಾರ್, ಜಿ.ಆರ್.ಪ್ರಕಾಶ್, ಆರ್.ರಂಗನಾಯ್ಕ, ಜಿ.ಆರ್.ಪ್ರಕಾಶ್ ಇತರರಿದ್ದರು.