ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕಿದೆ

mysore
Published on

ಮೈಸೂರು: ಪ್ರತಿಯೊಬ್ಬರೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಸುತ್ತಲಿನ ಪರಿಸರವನ್ನು ಉತ್ತಮವಾಗಿ ಇರಿಸಿಕೊಳ್ಳಲು ಪ್ರಯತ್ನ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕಿದೆ ಎಂದು ಸೆಸ್ಕ್ ಅಧ್ಯಕ್ಷರೂ ಆದ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ಹಾಗೂ ಮೈಸೂರು ವ್ಯಾಪ್ತಿಯ ಸಂಘ-ಸಂಸ್ಥೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ಕೆಸರೆಯಲ್ಲಿರುವ ಸೆಸ್ಕ್ ಕಾಲನಿಯಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲರೂ ನಿತ್ಯದ ಬೇಕು ಬೇಡಗಳ ನಡುವೆ ಪರಿಸರದ ಮೇಲೆ ಗದಾಪ್ರಹಾರ ಮಾಡುತ್ತಿದ್ದು, ಪರಿಸರ ಉಳಿಸುವ ಪ್ರಯತ್ನಗಳ ನಡುವೆಯೂ ನಮ್ಮ ಅರಿವಿಗೆ ಬಾರದಂತೆ ಅದಕ್ಕೆ ಹಾನಿಯಾಗುವಂತೆ ನಡೆಯುತ್ತಿದ್ದೇವೆ. ಇದರಿಂದಾಗಿ ಸಾಕಷ್ಟು ಪರಿಣಾಮ ಎದುರಿಸಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಹಿಂದೆ ಆಧುನಿಕತೆ ಇಲ್ಲದಿದ್ದರೂ ನಮ್ಮ ಪೂರ್ವಿಕರು ಉತ್ತಮ ಆಹಾರ ಸೇವನೆ ಮಾಡುತ್ತಿದ್ದರು. ಜತೆಗೆ ಆರೋಗ್ಯವಂತರಾಗಿದ್ದರು. ನಮ್ಮ ಆರೋಗ್ಯವೂ ಒಂದು ಪರಿಸರವಾಗಿದ್ದು, ಯಾವುದೇ ಕಾಯಿಲೆಗೆ ತುತ್ತಾಗದೆ, ಔಷಧ ಬಳಸದೆ ಬದುಕಬೇಕಿದೆ. ಪರಿಸರ ಉತ್ತಮವಾಗಿದ್ದರೆ ಆರೋಗ್ಯ ಉತ್ತಮವಾಗಿರಲಿದ್ದು, ಈ ನಿಟ್ಟಿನಲ್ಲಿ ನಾವು ಚೆನ್ನಾಗಿರುವ ಜತೆಗೆ ನಮ್ಮ ಸುತ್ತಲಿನ ಪರಿಸರವನ್ನು ಉತ್ತಮವಾಗಿ ಇರಿಸಿಕೊಳ್ಳಬೇಕಿದೆ. ಸೆಸ್ಕ್ ಕುಟುಂಬದಲ್ಲಿರುವ 8 ಸಾವಿರ ಅಧಿಕಾರಿ ಮತ್ತು ಸಿಬ್ಬಂದಿ ತಲಾ 2 ಸಸಿಗಳನ್ನು ನೆಟ್ಟು ಪರಿಸರ ಕಾಪಾಡಬೇಕಿದ್ದು, ಇದಕ್ಕಾಗಿ ಸೆಸ್ಕ್ ವತಿಯಿಂದ ಉಚಿತವಾಗಿ ಸಸಿಗಳನ್ನು ನೀಡಲಾಗುವುದು ಎಂದರು.

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಮಾತನಾಡಿ, ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಸೆಸ್ಕ್ ವ್ಯಾಪ್ತಿಯ ಎಲ್ಲ ಕಚೇರಿಗಳಲ್ಲಿ ಒಂದು ವಾರ ಕಾಲ ಕಾರ್ಯಕ್ರಮ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಪರಿಸರ ದಿನವನ್ನು ಆಚರಿಸುವ ಜತೆಗೆ ಪ್ರತಿ ಕಚೇರಿ ಆವರಣದಲ್ಲಿ ಕನಿಷ್ಠ 5 ಸಸಿಗಳನ್ನು ನೆಡಬೇಕಿದೆ.

ಇದಕ್ಕಾಗಿ ನಿಗಮ ಕಚೇರಿಯಲ್ಲಿ 50ಕ್ಕೂ ಹೆಚ್ಚು ಮಹಾಘನಿ ಸಸಿಗಳನ್ನು ಇರಿಸಿದ್ದು, ಅಗತ್ಯವಿರುವವರು ನಿಗಮ ಕಚೇರಿಯಿಂದ ಸಸಿ ಪಡೆದು, ತಮ್ಮ ಕಚೇರಿ ಆವರಣದಲ್ಲಿ ಇವುಗಳನ್ನು ನೆಡಬೇಕಿದೆ. ಆ ಮೂಲಕ ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗೋಣ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ.ಬೆಲವಲ ರಾಮಕೃಷ್ಣ, ಮೈಸೂರು ವಲಯದ ಮುಖ್ಯ ಇಂಜಿನಿಯರ್ ಡಿ.ಜೆ.ದಿವಾಕರ್, ಅಧೀಕ್ಷಕ ಇಂಜಿನಿಯರ್‌ರಾದ ಸೋಮಶೇಖರ್, ಸುನೀಲ್ ಕುಮಾರ್, ಸೆಸ್ಕ್ ಪ್ರಧಾನ ವ್ಯವಸ್ಥಾಪಕಿ(ತಾಂತ್ರಿಕ) ಶರಣಮ್ಮ ಎಸ್.ಜಂಗಿನ, ಪ್ರಧಾನ ವ್ಯವಸ್ಥಾಪಕ ಕೆ.ಎಲ್.ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net