

ಉಳ್ಳಾಗಡ್ಡಿ-ಖಾನಾಪುರ: ಪರಿಸರವು ತನ್ನ ಸಮತೋಲನ ಕಳೆದುಕೊಳುತ್ತಿರುವುದರಿಂದ ಪ್ರಕೃತಿಯಲ್ಲಿ ವಿಕೋಪಗಳು ಸಂಭವಿಸಿ ಪ್ರಾಣಹಾನಿಗಳಾಗುತ್ತಿವೆ. ವನ್ಯ ಜೀವಿ,
ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಸಮೀಪದ ಹಿಡಕಲ್ ಡ್ಯಾಂನಲ್ಲಿ ರಾಜಾ ಲಖಮಗೌಡ ಉದ್ಯಾನಕಾಶಿ ಅಭಿವೃದ್ಧಿ ಯೋಜನೆಯಡಿ ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಶ್ರೀ ಉಮೇಶ ಕತ್ತಿ ಚಿಟ್ಟೆ ಉದ್ಯಾನವನ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ದಿ.ಉಮೇಶ ಕತ್ತಿ ಅವರು ಕನಸಿನಂತೆ ಹಿಡಕಲ್ ಜಲಾಶಯ ಪರಿಸರದಲ್ಲಿ ಮೈಸೂರು ಮಾದರಿ ಉದ್ಯಾನವನ ನಿರ್ಮಿಸಲು ಅರಣ್ಯ ಇಲಾಖೆಯಿಂದ ಅನುದಾನ ನೀಡಿ ಸಹಕರಿಸಲಾಗುವುದು. ಉದ್ಯಾನವನದಲ್ಲಿ ಪಕ್ಷಿಧಾಮ ನಿರ್ಮಿಸಲು ಶಾಸಕ ನಿಖಿಲ ಕತ್ತಿ ಅವರು 9 ಕೋಟಿ ರೂ. ಅನುದಾನಕ್ಕಾಗಿ ಅಂದಾಜು ಪತ್ರಿಕೆ ತಯಾರಿಸಿದ್ದು, ಈ ಬಗ್ಗೆ ಪರಿಶೀಲಿಸಿ ಅನುದಾನ ಬಿಡುಗಡೆಗೊಳಿಸಲಾಗುವುದು. ಅರಣ್ಯ, ಪರಿಸರ, ವನ್ಯ ಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಶಾಸಕ ನಿಖಿಲ್ ಕತ್ತಿ ಮಾತನಾಡಿ, ದಿ.ಉಮೇಶ ಕತ್ತಿ ಅವರು ಈ ಭಾಗದ ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಉದ್ಯಾನ ಕಾಶಿ ನಿರ್ಮಾಣದ ಕನಸು ಕಂಡಿದ್ದರು. ಅವರು ಕನಸು ಹಂತ-ಹಂತವಾಗಿ ಸಕಾರಗೊಳಿಸಲಾಗುತ್ತಿದೆ. ನೀರಾವರಿ ಇಲಾಖೆಯಿಂದ ಡ್ಯಾಂನಲ್ಲಿ ಎರಡು ಕೆರೆ ನಿರ್ಮಿಸಲಾಗುತ್ತಿದೆ. ಸದ್ಯ 1 ಕೆರೆ ಪೂರ್ಣಗೊಂಡಿದ್ದು, ಇನ್ನೊಂದು ಕೆರೆ ಪ್ರಗತಿಯಲ್ಲಿದೆ. ವಾಹನ ನಿಲುಗಡೆ ಸ್ಥಳದ ಕಾಮಗಾರಿ ಪ್ರಗತಿಯಲ್ಲಿದ್ದು, 2025ರ ಏಪ್ರಿಲ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಬಸವರಾಜ ಮಟಗಾರ, ಪೃಥ್ವಿ ಕತ್ತಿ, ರಾಜೇಂದ್ರ ಪಾಟೀಲ, ಕಲಗೌಡ ಪಾಟೀಲ, ತಹಸೀಲ್ದಾರ್ ಮಂಜುಳಾ ನಾಯಿಕ, ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಅರಣ್ಯ ಇಲಾಖೆಯ ಪ್ರಧಾನ ಅಧಿಕಾರಿಗಳಾದ ಬ್ರೀಜೇಶ ದಿಕ್ಷಿತ, ರಾಜಶೇಖರ ಪಾಟೀಲ, ಬ್ರೀಜೇಶ ಕುಮಾರ, ತಾಪಂ ಇಒ ಟಿ.ಆರ್. ಮಲ್ನಾಡ, ಮಂಜುನಾಥ ಚೌವ್ಹಾಣ, ಜೆ.ಎಸ್.ಕರೆನ್ನವರ, ಎಸ್.ಎಸ್.ಹಿರೇಮಠ ಇತರರಿದ್ದರು.
ವನ್ಯ ಜೀವಿ, ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈಗಾಗಲೇ ಅರಣ್ಯ ಇಲಾಖೆಯಿಂದ ಕೋಟಿ ಸಸಿ ನೀಡಲಾಗಿದೆ. ಬೆಳಗಾವಿಯಲ್ಲಿ ಜರುಗಲಿರುವ ಕಾಂಗ್ರೆಸ್ ಶತಮಾನೋತ್ಸವದ ಅಂಗವಾಗಿ ಒಂದು ಕೋಟಿ ಸಸಿ ನೀಡುವ ಚಿಂತನೆ ನಡೆಸಲಾಗಿದೆ. - ಈಶ್ವರ ಖಂಡ್ರೆ ಸಚಿವ