

ಮೈಸೂರು: ನಿತ್ಯ ಸವಾಲಿನೊಂದಿಗೆ ಕಾರ್ಯನಿರ್ವಹಿಸುವ ಅರಣ್ಯ ಸಿಬ್ಬಂದಿಯ ಕೆಲಸ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ್ದಾಗಿದೆ. ಈ ಸಮಯದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಮಾಡುವ ಕಾರ್ಯ ಸ್ಮರಣೀಯ ಎಂದು ನಗರ ಪೊಲೀಸ್ ಕಮೀಷನರ್ ರಮೇಶ್ ಬಾನೋತ್ ಅಭಿಪ್ರಾಯಪಟ್ಟರು.
ಅರಣ್ಯ ಇಲಾಖೆಯಿಂದ ಅಶೋಕಪುರಂನ ಅರಣ್ಯಭವನದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ರಕ್ಷಿಸಲು ಪ್ರಾಣತ್ಯಾಗ ಮಾಡಿದ ಅರಣ್ಯ ಸಿಬ್ಬಂದಿ ಸ್ಮಾರಕಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
ಅರಣ್ಯ ಸಿಬ್ಬಂದಿ ಕೆಲಸ ಸುಲಭವಾದುದ್ದಲ್ಲ. ಪ್ರತಿ ದಿನವೂ ಹೊಸ ಹೊಸ ಸವಾಲು ಎದುರಾಗುತ್ತಲೇ ಇರುತ್ತವೆ. ಗಸ್ತಿನಲ್ಲಿದ್ದಾಗ ಅರಣ್ಯದ ಒಳಗೆ ಎದುರಾಗುವ ಸವಾಲು, ಬೇಟೆಗಾರರಿಂದಾಗುವ ಸಮಸ್ಯೆ, ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಮಾಡಬೇಕಾದ ಸಂದರ್ಭದಲ್ಲೂ ಅನೇಕ ಸವಾಲುಗಳು ಇರಲಿವೆ ಎಂದು ಹೇಳಿದರು.
ಖಾಕಿ ಸಮವಸ್ತ್ರ ಧರಿಸಿದ ಅರಣ್ಯ ಹಾಗೂ ಪೋಲಿಸ್ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಬೇಕಾಗುತ್ತದೆ. ಈ ಸಮವಸ್ತ್ರ ಧರಿಸಿರುವ ಸಿಬ್ಬಂದಿಗೆ ಹಬ್ಬ, ವಾರದ ರಜೆ ಸೇರಿದಂತೆ ಯಾವುದೇ ರಜಾ ದಿನಗಳನ್ನು ಮನೆಯಲ್ಲಿ ಕಳೆಯಲು ಸಾಧ್ಯವಾಗುವುದಿಲ್ಲ. ರಜೆ ದಿನದಂದು ಯಾವುದೇ ಘಟನೆ ನಡೆದರೆ ಕರ್ತವ್ಯಕ್ಕೆ ಹೋಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಕೆಲಸ ಜವಾಬ್ದಾರಿಯುತ ಎಂದು ಹೇಳಿದರು.
ಪರಿಸರ ಮಾಲಿನ್ಯ, ಅರಣ್ಯದ ಕೊರತೆಯಿಂದಲೇ ಈಗಾಗಲೇ ಮಳೆಗಾಲದಲ್ಲಿಯೇ ಮಳೆ ಅಭಾವ ಉಂಟಾಗುತ್ತಿದೆ. ಪಕ್ಷಿ, ಪ್ರಾಣಿ ಸಂಕುಲ ನಶಿಸುತ್ತಿದ್ದು, ಪರಿಸರ ಸಂರಕ್ಷಿಸದಿದ್ದರೆ, ಜನರ ಜೀವನ ಕಷ್ಟಕರವಾಗಿರುತ್ತದೆ. ಪರಿಸರದ ಸಮತೋಲನ ತಪ್ಪುತ್ತದೆ. ಅದಕ್ಕಾಗಿ ಪರಿಸರ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆ ತೊಡಗಿಸಿಕೊಂಡಿದ್ದು, ಜನರ ಸಹಕಾರವೂ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿಪ್ರಿಯಾ ಮಾತನಾಡಿ, ಕರ್ತವ್ಯದ ವೇಳೆ ಹುತಾತ್ಮರಾದ ಎಲ್ಲ ಸಿಬ್ಬಂದಿಯನ್ನು ಸ್ಮರಿಸುವುದರೊಂದಿಗೆ ಕರ್ತವ್ಯದ ವೇಳೆ ಎಚ್ಚರಿಕೆಯಿಂದ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಪಣ ತೊಡಬೇಕು ಎಂದು ಸಲಹೆ ನೀಡಿದರು.
ಡಿಸಿಎಫ್ ಡಾ.ಕೆ.ಎನ್.ಬಸವರಾಜು ಅವರು 1966ರಿಂದ 2023ರ ಸೆಪ್ಟೆಂಬರ್‌ವರೆಗೆ ಹುತಾತ್ಮರಾದ 59 ಸಿಬ್ಬಂದಿ ಹೆಸರನ್ನು ಓದಿದರು. ಬಳಿಕ ಎಲ್ಲರೂ 2 ನಿಮಿಷ ಮೌನಾಚರಣೆ ಮಾಡಿದರು.
ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆಯಿಂದ ಹುತಾತ್ಮರಾದ ಶಾರ್ಪ್ ಶೂಟರ್ ವೆಂಕಟೇಶ್ ಅವರ ಹೆಸರನ್ನು ಸ್ಮಾರಕದ ಮೇಲೆ ಕೆತ್ತಲಾಗಿದ್ದು, ಸ್ಮಾರಕಕ್ಕೆ ಗೌರವ ಸಲ್ಲಿಸಲಾಯಿತು. ಅಲ್ಲದೆ, ಕರ್ತವ್ಯದ ವೇಳೆ ನರಹಂತಕ ವೀರಪ್ಪನ್‌ನಿಂದ ಪ್ರಾಣ ಕಳೆದುಕೊಂಡ ಐಎಫ್‌ಎಸ್ ಅಧಿಕಾರಿಗಳಾದ ಶ್ರೀನಿವಾಸ್ ಮತ್ತು ಮಣಿಕಂದನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಗಾಳಿಯಲ್ಲಿ ಗುಂಡು ಹಾರಿಸಿ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಿಸಲಾಯಿತು. ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸೌರಭ್‌ಕುಮಾರ್, ಕಾರ್ಯಯೋಜನೆ ವಿಭಾಗದ ಡಿಸಿಎಫ್ ಲಿಂಗರಾಜ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್‌ಕುಮಾರ್, ಎಸಿಎಫ್ ಲಕ್ಷ್ಮೀಕಾಂತ್, ಆರ್‌ಎಫ್‌ಒ ಸುರೇಂದ್ರ ಇತರರು ಇದ್ದರು.