ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ

9blrp1
Published on

ಬೇಲೂರು: ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ನಾಶಕ್ಕೆ ಕಾರಣವಾಗುತ್ತಿದ್ದೇವೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಪುರಸಭೆ ಅಧ್ಯಕ್ಷೆ ಹಾಗೂ ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.


ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಜ್ಞಾನ ವಿಜ್ಞಾನ ಸಮಿತಿಯಿಂದ ಶನಿವಾರ ಸಂಜೆ ಬೇಲೂರು ಪಟ್ಟಣದ ವಿಷ್ಣು ಸಮುದ್ರ ಕಲ್ಯಾಣಿ ಮತ್ತು ಆವರಣ ಸ್ವಚ್ಛಗೊಳಿಸಿ ಮಾತನಾಡಿದ ಅವರು, ಚನ್ನಕೇಶವಸ್ವಾಮಿ ರಥೋತ್ಸವಕ್ಕೆಂದು ಆಗಮಿಸಿದ್ದ ಭಕ್ತರು ಇಲ್ಲಿನ ವಿಷ್ಣುಸಮುದ್ರ ಕಲ್ಯಾಣಿ ಆವರಣ ಎಲ್ಲೆಂದರಲ್ಲಿ ಕಸ ಕಡ್ಡಿಗಳನ್ನು ಹಾಕಿದ್ದಲ್ಲದೆ ಕಲ್ಯಾಣಿಯ ನೀರಿಗೆ ಸೋಪು, ಶಾಂಪುಗಳನ್ನು ಹಾಕಿ, ಸ್ನಾನ ಮಾಡಿದ ನಂತರ ಬಟ್ಟೆಗಳನ್ನೂ ಸಹ ಎಲ್ಲೆಂದರಲ್ಲಿ ಹಾಕಿರುವುದರಿಂದ ನೀರಿನಲ್ಲಿ ವಾಸಿಸುವ ಜಲಚರಗಳ ಪ್ರಾಣಕ್ಕೆ ಕುತ್ತುಂಟಾಗುತ್ತಿದೆ. ಇದನ್ನು ಜನರಲ್ಲಿ ಮನರಿಕೆ ಮಾಡಿಕೊಡುವ ನಿಟ್ಟಿನಲ್ಲಿ ನಾವು ಮುಂದಾಗಿದ್ದೇವೆ. ಸಾರ್ವಜನಿಕರೂ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪರಿಸರಕ್ಕೆ ಹಾನಿಯಾಗುವಂಥ ವಸ್ತುಗಳನ್ನೇ ಹೆಚ್ಚಾಗಿ ಜನರು ಬಳಸುತ್ತಿರುವುದು ಕಾಣುತಿದ್ದೇವೆ. ಆದರೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಜ್ಞಾನ ವಿಜ್ಞಾನ ಸಮಿತಿಯಿಂದ ಮುಂದಾಗಿದ್ದು ನಾಗರಿಕರು ಪ್ಲಾಸ್ಟಿಕ್ ಬಳಕೆ ಮಾಡಬಾರದು ಮತ್ತು ಮೌಢ್ಯದಿಂದ ಹೊರಬಂದು ವೈಜ್ಞಾನಿಕವಾಗಿ ಚಿಂತಿಸಿ ಸ್ವಯಂಪ್ರೇರಿತರಾಗಿ ಪರಿಸರ ರಕ್ಷಣೆಗೆ ಮುಂದಾಗುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಪುರಸಭೆ ಸದಸ್ಯ ಫಯಾಜ್ ಅಹಮದ್, ಹಸಿರು ಭೂಮಿ ಪ್ರತಿಷ್ಠಾನದ ಉಪಾಧ್ಯಕ್ಷೆ ಸೌಭಾಗ್ಯ, ಕಾರ್ಯದರ್ಶಿ ಮಹೇಶ್, ಸಮಿತಿಯ ನೂರ್ ಅಹಮದ್, ನರಸಿಂಹ, ಶೇಷಪ್ಪ, ಚಂದ್ರು, ಸಂಪತ್, ವೀರಭದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net