

ಆನೇಕಲ್: ಪರಿಸರ ರಕ್ಷಣೆ ಜತೆಗೆ ಸ್ವಚ್ಛತೆ ಕಾಪಾಡಲೂ ಆದ್ಯತೆ ನೀಡಲು ಜನರ ಸಹಕಾರ ಅಗತ್ಯ ಎಂದು ಅತ್ತಿಬೆಲೆ ಪುರಸಭಾ ಅಧ್ಯಕ್ಷೆ ಜಯಲಕ್ಷ್ಮೀ ಹೇಳಿದರು.
ಅತ್ತಿಬೆಲೆ ಪುರಸಭೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಜನಜಾಗೃತಿ, ಸ್ವಚ್ಛತಾ ಅಭಿಯಾನ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರು ಎಲ್ಲೆಂದರಲ್ಲಿ ಕಸ ಹಾಕದೆ ಪುರಸಭೆ ವಾಹನಕ್ಕೆ ಕಸ ನೀಡಬೇಕು. ಇದರಿಂದ ಸಾಂಕ್ರಾಮಿಕ ಹರಡದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದಾಗಿದೆ ಎಂದರು.
ಕೆಲವರು ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದು, ಇದರಿಂದಾಗಿ ರಸ್ತೆ ಬಳಿ ತ್ಯಾಜ್ಯ ಸಂಗ್ರಹಗೊಂಡು ಸಾಂಕ್ರಾಮಿಕ ರೋಗ ತಗಲುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಉತ್ತಮ ಪರಿಸರಕ್ಕೆ ಜನರ ಸಹಕಾರ ಅಗತ್ಯ ಎಂದರು.
ಪರಿಸರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಮನೆಗೊಂದು ಮರ ನೆಡುವ ಕಾರ್ಯಕ್ರಮ ಹಮ್ಮಿಕೊಂಡರೂ ನೆಟ್ಟ ಗಿಡವನ್ನು ನಾವೇ ಪೋಷಣೆ ಮಾಡಬೇಕು. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದರೆ ಒಂದೆರಡು ವರ್ಷದಲ್ಲಿ ಗಿಡ ಮರವಾಗಿ ಮುಂದೆ ನಮಗೆ ಉತ್ತಮ ಗಾಳಿ ನೀಡುತ್ತದೆ ಎಂದರು.
ಅತ್ತಿಬೆಲೆ ಪುರಸಭೆ ಮುಖ್ಯಾಧಿಕಾರಿ ಶ್ವೇತಾಭಾಯಿ ಮಾತನಾಡಿ, ಅಂಗಡಿಗಳ ಮಾಲೀಕರು ಪ್ರತಿದಿನ ಕಸವನ್ನು ಪುರಸಭೆ ವಾಹನಕ್ಕೆ ಹಾಕಬೇಕು. ಈಗಾಗಲೇ ಹಲವಾರು ಬಾರಿ ಸೂಚನೆ ನೀಡಿದರೂ ಕೆಲವು ಅಂಗಡಿ ಮಾಲೀಕರು ಬೀದಿಗಳಲ್ಲಿ ಕಸ ಹಾಕುತ್ತಿರುವ ಬಗ್ಗೆ ದೂರು ಬಂದಿದೆ. ಇದು ಮುಂದುವರಿದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಆದರೂ ಕೆಲವೆಡೆ ಬಳಕೆ ಮಾಡುವ ಆರೋಪವಿದ್ದು, ಮುಂದಿನ ದಿನಗಳಲ್ಲಿ ದಾಳಿ ಮಾಡಿ, ಪ್ಲಾಸ್ಟಿಕ್ ವಶಕ್ಕೆ ಪಡೆದುಕೊಂಡು ದಂಡ ವಿಧಿಸಲಾಗುವುದು ಎಂದರು. ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿ ಅಪರಾಧ ಕೃತ್ಯಕ್ಕೆ ಕಡಿವಾಣ ಹಾಕುವ ಜತೆಗೆ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಅತ್ತಿಬೆಲೆ ಪುರಸಭೆ ಹಾಗೂ ಕ್ರೆಡಿಕ್ ಐ ಸಂಸ್ಥೆ ಸಹಭಾಗಿತ್ವದಲ್ಲಿ ಅತ್ತಿಬೆಲೆ ವೃತ್ತ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಿಬ್ಬಂದಿ ಹಾಗೂ ಕಾರ್ಮಿಕರು ಭಿತ್ತಿಪತ್ರ ಹಿಡಿದು ಮೆರವಣಿಗೆ ತೆರಳುವ ಮೂಲಕ ಜನಜಾಗೃತಿ ಮೂಡಿಸಿದರು.
ವಿದ್ಯಾನಿಕೇತನ ಸೊಸೈಟಿಯ ನಾಗರಾಜ್, ಕ್ರೆಡಿಟ್ ಐ ಮ್ಯಾನೇಂಜಿಗ್ ಟ್ರಸ್ಟಿ ಡಾ.ಎಂ.ಪಿ. ವರ್ಷಾ ಹಾಜರಿದ್ದರು.