

ಚಾಮರಾಜನಗರ: ವನ್ಯಜೀವಿಗಳನ್ನು ರಕ್ಷಿಸಲು ಮತ್ತು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ದಣಿವರಿಯದೆ ಕೆಲಸ ಮಾಡುವ ಬುಡಕಟ್ಟು ಸಮುದಾಯದ ನೌಕರರು ಅರಣ್ಯ ಸಂರಕ್ಷಣೆಯಲ್ಲಿ ಹೆಚ್ಚು ನೆರವಾಗುತ್ತಿದ್ದಾರೆ ಎಂದು ಯುಎಸ್‌ಟಿ ಜಾಗತಿಕ ಕಾರ್ಯಕ್ರಮ ವ್ಯವಸ್ಥಾಪಕಿ ಸ್ಮಿತಾಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ಕಚೇರಿಯಲ್ಲಿ ಬಂಡೀಪುರ ರೂಪಾಂತರ ಕಂಪನಿಯಾದ ಯುಎಸ್‌ಟಿ ವತಿಯಿಂದ ಗುರುವಾರ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆಗಾಗಿ ಕೆಲಸ ಮಾಡುವ ಸ್ಥಳೀಯ ಬುಡಕಟ್ಟು ನೌಕರರಿಗೆ ಅಗತ್ಯ ಪರಿಕರಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುವ ಹೆಚ್ಚಿನವರು ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ದೈನಂದಿನ ಅರಣ್ಯ ಸಂರಕ್ಷಣೆಯಲ್ಲಿ ಅವರು ಬೆನ್ನೆಲುಬಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಬಂಡೀಪುರ ಮತ್ತು ಕಬಿನಿ ಅರಣ್ಯ ಪ್ರದೇಶಗಳಲ್ಲಿನ ಅರಣ್ಯ ಸಿಬ್ಬಂದಿ ಮತ್ತು ಬುಡಕಟ್ಟು ಸಮುದಾಯಗಳನ್ನು ಬೆಂಬಲಿಸಲು ಯುಎಸ್ ಹಲವಾರು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದು ತಿಳಿಸಿದರು.
ಯುಎಸ್‌ಟಿ ಕೇಂದ್ರದ ಮುಖ್ಯಸ್ಥ ಕಿರಣ್ ಕುಮಾರ್ ದೊರೆಸ್ವಾಮಿ ಮಾತನಾಡಿ, ವನ್ಯಜೀವಿಗಳನ್ನು ರಕ್ಷಿಸಲು ಮತ್ತು ನೈಸರ್ಗಿಕ ಪರಂಪರೆಯನ್ನು ಸಂರಕ್ಷಿಸಲು ಕಷ್ಟಕರವಾದ ಭೂಪ್ರದೇಶ ಮತ್ತು ಅನಿರೀಕ್ಷಿತ ಹವಾಮಾನವನ್ನು ಧೈರ್ಯದಿಂದ ಎದುರಿಸುವ ಬುಡಕಟ್ಟು ಸಮುದಾಯಗಳ 120 ಸಹಾಯಕ ಸಿಬ್ಬಂದಿಗೆ ಶೂ, ಟೊಪ್ಪಿ, ನೀರಿನ ಬಾಟಲಿ, ಊಟದ ಪೆಟ್ಟಿಗೆ ಮತ್ತು ಜಾಕೆಟ್‌ಗಳನ್ನು ಒಳಗೊಂಡಂತೆ ಅಗತ್ಯ ಕಿಟ್ ವಿತರಣೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯುಎಸ್‌ಟಿ ತಂಡದ ಸದಸ್ಯರಾದ ಆದಿತ್ಯ ಕುಮಾರ್, ಮನು ಕೋಲಾರ, ರುದ್ರಯ್ಯ, ನಿಧಿ ಗಾರ್ಗ್, ನಿತಿನ್ ನಾರಾಯಣ್ ದೇಶಿಕ್, ರಾಜೀವ ಲೋಚನ್ ಶೇಷಾದ್ರಿ, ಸಂತೋಷ್ ಶೆಟ್ಟಿ, ಶ್ವೇತಾ ಶ್ರೀನಿವಾಸ್, ವಿಕಾಸ್ ರಾಜು, ವಿಶ್ವಾಸ್ ಶಿವಶಂಕರ್ ಹಾಜರಿದ್ದರು.