ಪರಿಸರ ಪ್ರೇಮದಿಂದ ಅರಳಿದ ಹೂವಿನ ತೋಟ

6Thyagarthi 1 dere story
ಸಾಗರ ತಾಲೂಕಿನ ರಾಮನಗರದ ವಿಶ್ವನಾಥ್ ಅವರ ಡೇರೆ ತೋಟದಲ್ಲಿ ಆಯೋಜಿಸಿರುವ ಡೇರೆ ಮೇಳ.
Published on

ವಸಂತ್ ನೀಚಡಿ ತ್ಯಾಗರ್ತಿ

ವ್ಯಾಪಾರದ ಉದ್ದೇಶದಿಂದ ತೋಟಗಳನ್ನು ಮಾಡುವುದು ಸಾಮಾನ್ಯ. ಆದರೆ ಪರಿಸರ ಆಸಕ್ತಿ ಕಾರಣದಿಂದ ತೋಟ ಮಾಡುವುದು ವಿಶೇಷ. ಇಂತಹ ವಿಶೇಷತೆಗೆ ಕಾರಣರಾಗಿದ್ದಾರೆ ನಿವೃತ್ತ ಅರಣ್ಯಾಕಾರಿ ವಿಶ್ವನಾಥ್ ಮತ್ತು ಸಾವಿತ್ರಿ ದಂಪತಿ.

ಸಾಗರದ ಭೀಮನಕೋಣೆ ರಸ್ತೆಯ ರಾಮನಗರ ನಿವಾಸಿ ವಿಶ್ವನಾಥ್ ಅರಣ್ಯಾಕಾರಿಯಾಗಿ ಕರ್ತವ್ಯ ನಿರ್ವಹಿಸಿದವರು. ಅರಣ್ಯ ಇಲಾಖೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೂಲತಃ ಕೃಷಿ ಕುಟುಂಬದವರಾಗಿದ್ದು, ಮೊದಲಿನಿಂದಲೂ ಪರಿಸರ ಆಸಕ್ತಿ ಹೊಂದಿದ್ದು, ನಿವೃತ್ತಿ ನಂತರ ಸುಂದರ ಹೊವು ಹಾಗೂ ಪರಿಸರಕ್ಕೆ ಪೂರಕ ಮರಗಳನ್ನು ಬೆಳೆಯುವ ಮೂಲಕ ಗಮನಸೆಳೆದಿದ್ದಾರೆ.

ಪ್ರಸ್ತುತ ಸಾಗರದ ರಾಮನಗರದಲ್ಲಿನ 22 ಎಕರೆ ಜಮೀನಿನಲ್ಲಿ 15 ಎಕರೆಯಲ್ಲಿ ಸಾಗುವಾನಿ, ಅಗರ್‌ವುಡ್ ಮರಗಳನ್ನು ಬೆಳೆಸಿದ್ದಾರೆ. ಅಗರ್‌ವುಡ್ ಮರಗಳು ಈಗಾಗಲೇ ಆದಾಯ ನೀಡುವ ಹಂತಕ್ಕೆ ಬೆಳೆದಿವೆ. ಇನ್ನುಳಿದ ಜಾಗದಲ್ಲಿ ವಿದೇಶಿ ಹಾಗೂ ದೇಶಿ ತಳಿ ಹಣ್ಣಿನ ಮರಗಳು ಸೇರಿ ವಿವಿಧ ಬಗೆಯ ಹೂವಿನ ತೋಟ ಮಾಡಿದ್ದಾರೆ.

ಉತ್ತಮ ತಳಿ ಡೇರೆ, ದಾಸವಾಳ, ಗುಲಾಬಿ, ಸೇವಂತಿ ಬೆಳೆಸಿದ್ದಾರೆ. ಒಂದು ಎಕರೆ ಜಾಗದಲ್ಲಿ ನಿರ್ದಿಷ್ಟವಾಗಿ ಬೆಳೆದಿರುವ ಬಣ್ಣಬಣ್ಣದ ಹಲವು ತಳಿಯ ಡೇರೆ ಹೂವುಗಳು ಜನರನ್ನು ಆಕರ್ಷಿಸುತ್ತಿವೆ. ಇನ್ನೂರಕ್ಕೂ ಹೆಚ್ಚಿನ ವೈವಿಧ್ಯಮಯ ಡೇರೆ ಹೂವಿನ ಗಿಡಗಳು ರಾರಾಜಿಸುತ್ತಿವೆ.

ಹೂವಿನ ಗಿಡಗಳನ್ನು ಮಕ್ಕಳಂತೆ ಆರೈಕೆ ಮಾಡಲಾಗಿದೆ. 10-15 ಕೆಜಿ ಮಣ್ಣು ಹಿಡಿಸುವ ಪಾಲಿಥೀನ್ ಕವರ್‌ನಲ್ಲಿ ಡೇರೆ ಗಿಡಗಳನ್ನು ಬೆಳೆಸಿ ಸಾಲಾಗಿ ಜೋಡಿಸಿ ಹೂವು ಬಿಡುವ ಸಮಯದಲ್ಲಿ ನೋಡುಗರಿಗೆ ಗಿಡಗಳ ಮಧ್ಯೆ ಓಡಾಡಲು ವಾಕಿಂಗ್ ಪಾಥ್ ನಿರ್ಮಿಸಿದ್ದಾರೆ. ಮಳೆ ಕೈಕೊಟ್ಟರೂ ಗಿಡಗಳಿಗೆ ನೀರಿನ ಕೊರತೆ ಆಗದಂತೆ ತುಂತುರು ನೀರಾವರಿ ವ್ಯವಸ್ಥೆ ಒದಗಿಸಿದ್ದಾರೆ. ಇವರ ಪರಿಸರ ಪ್ರೇಮದಿಂದ ಮೂಡಿರುವ ಹೂವಿನ ತೋಟ, ಹೂವಿನ ಗಿಡಗಳನ್ನು ಬೆಳೆಸುವವರಿಗೆ ಮಾದರಿಯಾಗಿದೆ.

ಜನಾಕರ್ಷಣೆ ಕೇಂದ್ರ

ನಿವೃತ್ತ ಅರಣ್ಯಾಕಾರಿ ವಿಶ್ವನಾಥ್ ಅವರು ಪ್ರತಿ ವರ್ಷ ತಾವು ಬೆಳೆಸಿದ ಹೂವುಗಳನ್ನು ಸಾರ್ವಜನಿಕರಿಗೆ ತೋರಿಸುವ ಉದ್ದೇಶದಿಂದ ಡೇರೆ ಮೇಳ ನಡೆಸುತ್ತಾರೆ. ಡೇರೆ ಮೇಳದಲ್ಲಿ ನೂರಾರು ಜನರು ಕುಟುಂಬ ಸಮೇತರಾಗಿ ಆಗಮಿಸಿ ಡೇರೆ ತೋಟದಲ್ಲಿ ಹೂವುಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಾರೆ. ಮೊಬೈಲ್ನಲ್ಲಿ ಸುಂದರ ೆಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಹೂವಿನ ತೋಟ ನೋಡಲು ಬಂದ ಸಾರ್ವಜನಿಕರಿಗೆ ವಿಶ್ವನಾಥ್ ಕುಟುಂಬ ಸತ್ಕರಿಸುತ್ತಾರೆ. ಡೇರೆ ಮೇಳದ ಪ್ರಯತ್ನಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

6ತ್ಯಾಗರ್ತಿ ಡೇರೆ ್ಲವರ್ ಸ್ಟೋರಿ

ಸಾಗರದ ರಾಮನಗರ ಡೇರೆ ತೋಟದಲ್ಲಿ ವಿಶ್ವನಾಥ್ ಸಾವಿತ್ರಿ ದಂಪತಿ.

ಉತ್ತಮ ಇಳುವರಿ ಮೂಡಿಸಿದೆ ಸಂತಸ

ಒಟ್ಟು 22 ಎಕರೆ ಪ್ರದೇಶದಲ್ಲಿ 15 ಎಕರೆ ಜಾಗದಲ್ಲಿ ಸಾಗುವಾನಿ, ಅಗರ್‌ವುಡ್ ಮರಗಳನ್ನು ಬೆಳೆಯಲಾಗುತ್ತಿದೆ. ಉಳಿದಂತೆ ವಿವಿಧ ತಳಿಯ ಹಲಸು, ಮಾವು, ನೇರಳೆ, ರಂಬುಟಾನ್, ಮ್ಯಾಂಗೋಸ್ಟಿನ್, ಜಪೋಟಿಕಬಾ, ವೆಲ್ವೆಟ್ ಆಪಲ್ ರೀತಿ ವೆರೈಟಿ ತಳಿಯ ಹಣ್ಣಿನ ಗಿಡಗಳು ಹಾಗೂ ಹೂವಿನ ಗಿಡಗಳನ್ನು ಬೆಳೆಸಲಾಗಿದೆ.

ವ್ಯಾಪಾರದ ಉದ್ದೇಶದಿಂದ ಹೂವಿನ ತೋಟ ಮಾಡಲಿಲ್ಲ. ಮೂಲತಃ ಕೃಷಿ ಕುಟುಂಬದಿಂದ ಬಂದ ನಮಗೆ ಮತ್ತು ಅರಣ್ಯ ಇಲಾಖೆಯ ವೃತ್ತಿಯಲ್ಲಿ ಗಳಿಸಿದ ಅನುಭವ ತೋಟದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿತು. ನಮ್ಮ ಮನಸ್ಸಿನ ಸಂತೋಷಕ್ಕಾಗಿ ಡೇರೆ ಮೇಳ ನಡೆಸಿ ಪರಿಚಿತರನ್ನು ಆಹ್ವಾನಿಸಿ ಸಂಭ್ರಮಿಸುತ್ತೇವೆ.

ವಿಶ್ವನಾಥ್, ನಿವೃತ್ತ ಅರಣ್ಯಾಕಾರಿ

ವಿಶ್ವನಾಥ್ ಅವರ ಸಾಧನೆ ಒಂದು ಮಾದರಿ. ಇವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಂದು ಎಕರೆ ಪ್ರದೇಶದಲ್ಲಿ ಬೆಳೆದ ರಂಗು ರಂಗಿನ ಡೇರೆ ಹೂವಿನ ತೋಟ ವರ್ಣಿಸಲು ಸಾಧ್ಯವಿಲ್ಲ. ಅದ್ಭುತವಾಗಿರುವ ಹೂಗಳ ತೋಟ. ಗುಲಾಬಿ, ದಾಸವಾಳ, ಸೇವಂತಿ ಹೂಗಳಿವೆ.

ಡಾ.ಎಚ್.ಎಸ್.ಮೋಹನ್, ನೇತ್ರ ತಜ್ಞ, ಸಾಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net