

ಮೈಸೂರು: ದೇಶದಲ್ಲಿ ಪರಿಸರ ಪ್ರಜ್ಞೆಯನ್ನು ಶಿಸ್ತಿನಿಂದ ರೂಪಿಸಲು ಚಿಪ್ಕೋ ಚಳವಳಿ ಸಹಕಾರಿ ಆಯಿತು ಎಂದು ಲೇಖಕ ಜಗದೀಶ್ ಕೊಪ್ಪ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಚಿಪ್ಕೋ ಚಳವಳಿಯ ನೇತಾರ ಸುಂದರಲಾಲ್ ಬಹುಗುಣ ಅವರ ಬದುಕು ಹೋರಾಟ, ಚಿಂತನೆ ಕುರಿತ ಜಾರ್ಜ್ ಆಲ್ಫ್ರೆಡ್ ಜೇಮ್ಸ್ ಅವರ ಅನುವಾದಿತ ಕೃತಿ ‘ಅಪ್ಪಿಕೋ’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿಪ್ಕೋ ಚಳವಳಿಗೂ 300 ವರ್ಷದ ಹಿಂದೆ ಉತ್ತರಾಖಂಡಲ್ಲಿ ಪರಿಸರ ಸಂರಕ್ಷಣೆಯ ಪ್ರಯತ್ನ ನಡೆದಿತ್ತು. ಮತ್ತೆ ಅದೇ ನೆಲದಲ್ಲಿ ಬಹುಗುಣ ಅವರು ಹೋರಾಟದ ಕಿಚ್ಚು ಹಚ್ಚಿದ್ದರು. ಗಾಂಧೀಜಿಯವರಲ್ಲಿ, ಬಹುಗುಣ ಅವರಲ್ಲಿ ಮಾನವಕುಲದ ಒಳಿತಿನ ಅರಿವು ಸಮಗ್ರತೆಯಿಂದ ಕೂಡಿತ್ತು. ಪ್ರಾಮಾಣಿಕ ಮತ್ತು ಪಾರದರ್ಶಕ ಬದುಕು ಅವರ ಹೋರಾಟಗಳಿಗೆ ಗಟ್ಟಿತನವನ್ನು ತಂದುಕೊಟ್ಟಿತ್ತು. ಬಹುಗುಣರು ಗಾಂಧೀಜಿಯವರನ್ನು ತಮ್ಮ ಗುರುವೆಂದು ಕರೆದುಕೊಂಡಿದ್ದರು. ಅವರ ಉದಾತ್ತ ಚಿಂತನೆಯನ್ನು ಜೀವನದಲ್ಲಿ ಮೈಗೂಡಿಸಿಕೊಂಡಿದ್ದರು ಎಂದರು.
ಹಿಮಾಲಯದ ಕಾಡುಗಳ ಸಂರಕ್ಷಣೆಗಾಗಿ ಹೋರಾಟ ನಡೆಸಿದ ಅವರು, ತೆಹ್ರಿ ಅಣೆಕಟ್ಟು ವಿರೋಧಿ ಆಂದೋಲನವನ್ನು ಮುನ್ನಡೆಸಿದ್ದರು. ಅಭಿವೃದ್ಧಿಯ ಮುಖ್ಯ ಗುರಿ ಏನಾಗಿರಬೇಕು ಎಂಬುದನ್ನು ಅರಿಯಲು ಬಹುಗುಣರ ಬದುಕನ್ನು ಇಂದಿನ ಪೀಳಿಗೆ ಅಧ್ಯಯನ ಮಾಡಬೇಕು ಎಂದರು.
ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ, ಪರಿಸರ ಹೋರಾಟಗಾರ ಪಾಂಡುರಂಗ ಹೆಗಡೆ, ಕೃತಿಯ ಅನುವಾದಕಿ ಅರ್ಚನಾ ಖ್ಯಾಡಿ ಇದ್ದರು.