

ಹಲಗೂರು: ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ತಿಳಿಸಿ ಆ ಬಗ್ಗೆ ಪ್ರಜ್ಞೆ ಮೂಡಿಸುವ ಸಲುವಾಗಿ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಮಾಡುತ್ತಿರುವುದರಿಂದ ಅವರು ಮುಂದಿನ ದಿನಗಳಲ್ಲಿ ಗಿಡ, ಮರಗಳನ್ನು ನೆಟ್ಟು ಪರಿಸರ ಉಳಿಸಿ ಬೆಳೆಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ವಲಯ ಅರಣ್ಯಾಧಿಕಾರಿ ರವಿ ಬುರ್ಜಿ ತಿಳಿಸಿದರು.
ಮದ್ದೂರು ರಸ್ತೆಯಲ್ಲಿರುವ ಹಲಗೂರು ವಿದ್ಯಾಸಂಸ್ಥೆಯ ಶಾಲಾವರಣದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವನ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಕೋಟಿ ವೃಕ್ಷ ಅಭಿಯಾನದಡಿ ಜುಲೈ 1ರಿಂದ 7ರವರೆಗೆ ವನಮಹೋತ್ಸವವನ್ನು ಆಚರಿಸಲಾಗುತ್ತಿದೆ. ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸಸಿಗಳ ಸಂರಕ್ಷಣೆ ಮಾಡುವ ಜವಾಬ್ದಾರಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಆನಂದ್‌ಕುಮಾರ್ ಮಾತನಾಡಿ, ಅರಣ್ಯ ಇಲಾಖೆಯಿಂದ ನೀಡುವ ಸಸಿಗಳನ್ನು ನಾವು ಜೋಪಾನವಾಗಿ ಬೆಳೆಸುತ್ತೇವೆ. ಅದರ ಜವಾಬ್ದಾರಿ ನಮ್ಮದು ಎಂದರು.
ಅರಣ್ಯ ಇಲಾಖೆಯ ಅಧಿಕಾರಿಗಳಾದ ಶಿವರಾಜು, ಉಮೇಶ್, ಉಪ ತಹಸಿಲ್ದಾರ್ ಉಮೇಶ್, ವಿದ್ಯಾಸಂಸ್ಥೆಯ ಮಲ್ಲಿಕಾರ್ಜುನ ಸ್ವಾಮಿ, ಪ್ರವೀಣ, ಶ್ರೀನಿವಾಸಚಾರಿ, ಮುಖ್ಯ ಶಿಕ್ಷಕ ಎಚ್.ಶಿವರಾಮ್ ಸೇರಿದಂತೆ ಶಿಕ್ಷಕ ವೃಂದ ಉಪಸ್ಥಿತರಿದ್ದರು.