

ಚಿತ್ರದುರ್ಗ: ವಿಶ್ವ ಪರಿಸರ ದಿನಾಚರಣೆಯಂದು ಮಾತ್ರ ಪರಿಸರದ ಬಗ್ಗೆ ಕಾಳಜಿ ತೋರಿದರೆ ಸಾಲದು. ಪ್ರತಿ ದಿನವೂ ಪರಿಸರ ಪ್ರಜ್ಞೆ ಹೊಂದುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೀರಣ್ಣ ಸೋಮಶೇಖರ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ, ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ, ಸರ್ಕಾರಿ ಕಲಾ ಕಾಲೇಜು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಚಿತ್ರದುರ್ಗ ನಗರಸಭೆ ಸಹಯೋಗದಲ್ಲಿ ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪರಿಸರ ರಕ್ಷಣೆ ಅರಣ್ಯ ಇಲಾಖೆ ಅಥವಾ ಸ್ಥಳೀಯ ಸಂಸ್ಥೆಗಳ ಕೆಲಸವಲ್ಲ. ಅದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಸಾರ್ವಜನಿಕರು ತಮ್ಮ ಜನ್ಮ ದಿನಾಚರಣೆ ನಿಮಿತ್ತ ಕನಿಷ್ಠ ಒಂದು ಗಿಡ ನೆಡುವ ಮೂಲಕ ಪರಿಸರಕ್ಕೆ ಕಾಣಿಕೆ ನೀಡಬೇಕು ಎಂದರು.
1973ರ ಜೂ.5ರಂದು ಪ್ರಥಮವಾಗಿ ವಿಶ್ವ ಪರಿಸರ ದಿನ ಆಚರಣೆಗೆ ತರಲಾಯಿತು. ಪ್ರಸ್ತುತ 53ನೇ ವರ್ಷದ ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಪರಿಸರ ನಾಶದಿಂದ ಮಾನವನ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿವೆ. ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವುದು ಈ ಬಾರಿ ವಿಶ್ವ ಪರಿಸರ ದಿನಾಚರಣೆ ಘೋಷವಾಕ್ಯವಾಗಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಮಾತನಾಡಿ,ಪ್ರಾಧಿಕಾರದಿಂದ ಈಗಾಗಲೇ ಪ್ರತಿ ತಾಲೂಕಿನಲ್ಲಿ 10 ಸಾವಿರ ಗಿಡಗಳನ್ನು ಶಿಕ್ಷಣ, ಅರಣ್ಯ ಹಾಗೂ ಪರಿಸರ ಅಧಿಕಾರಿಗಳು ನೆಡಲಿದ್ದಾರೆ ಎಂದರು.
ನ್ಯಾಯಾಧೀಶರಾದ ಎ.ಎಂ. ಚೈತ್ರಾ, ಉಜ್ವಲಾ ವೀರಣ್ಣ ಸಿದ್ದಣ್ಣನವರ್, ಪೂಜಾ ಬೆಳಕೇರಿ, ನಿಖಿತಾ ಎಸ್. ಅಕ್ಕಿ, ಆರ್. ಸಹನಾ, ಪ್ರಾಂಶುಪಾಲ ಬಿ.ಟಿ. ತಿಪ್ಪೇರುದ್ರಸ್ವಾಮಿ, ನಗರಸಭೆ ಪೌರಾಯುಕ್ತೆ ಎಂ. ರೇಣುಕಾ, ಆರ್‌ಎಫ್‌ಒ ವಸಂತ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ವಿ. ಪ್ರಸಾದ್, ಬಿ.ಕೆ.ಬಸವರಾಜ್ ಇದ್ದರು.