ಪರಿಸರ ಪರವಾನಗಿಯೇ ನಿಯಮ ಬಾಹಿರ

karwar port
Published on

ಕಾರವಾರ: ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ತಮ್ಮ ವ್ಯಾಪ್ತಿ ಮೀರಿ ರಾಜ್ಯ ಪರಿಸರ ಹಾನಿ ಅಂದಾಜೀಕರಣ ಪ್ರಾಧಿಕಾರ (ಎಸ್​ಇಐಎಎ) ಪರವಾನಗಿ ನೀಡಿದೆ ಎಂದು ಸಾಗರ ವಿಜ್ಞಾನಿಗಳು ಹಾಗೂ ಮೀನುಗಾರ ಮುಖಂಡರು ಪ್ರಾಧಿಕಾರದ ಎದುರು ವಾದ ಮಂಡಿಸಿದ್ದಾರೆ.

ಹೈಕೋರ್ಟ್ ಸೂಚನೆಯಂತೆ ಎಸ್​ಇಎಎ ಸದಸ್ಯ ಕಾರ್ಯದರ್ಶಿ ವಿಜಯಕುಮಾರ ಗೋಗಿ ಅವರು ಸೋಮವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಅಹವಾಲು ಆಲಿಸಿ ಪಟ್ಟಿ ದಾಖಲಿಸಿದರು.

ವಿವಿಧ ಉದ್ದಿಮೆ ಅಥವಾ ಯೋಜನೆಗಳಿಗೆ ಎಲ್ಲಿಂದ ಪರಿಸರ ಪರವಾನಗಿ ಪಡೆಯಬೇಕು ಎಂಬುದನ್ನು ಕೇಂದ್ರ ಪರಿಸರ ಮಂತ್ರಾಲಯ ನಿಯಮಾವಳಿ ರೂಪಿಸಿದೆ. ಪರಿಸರ ಸೂಕ್ಷ್ಮ ವಲಯಗಳಿಂದ 10 ಕಿಮೀ ವ್ಯಾಪ್ತಿಯ ಯಾವುದೇ ಯೋಜನೆಗಳನ್ನು ಎ ಸ್ವರೂಪದ ಯೋಜನೆ ಎಂದು ಪರಿಗಣಿಸಿ ಕೇಂದ್ರ ಪರಿಸರ ಮಂತ್ರಾಲಯದಿಂದ ಪರವಾನಗಿ ಪಡೆಯಬೇಕು ಎಂಬ ನಿಯಮವಿದೆ.

2011ರ ಸಿಆರ್​ರೆಡ್ ತಿದ್ದುಪಡಿ ನಿಯಮಾವಳಿಗಳಂತೆ ಕಾರವಾರ ಕಾಳಿ ನದಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೊಷಿಸಲಾಗಿದೆ. 2018ರಲ್ಲಿ ಅದರ ನಕಾಶೆಯೂ ಸಿದ್ಧವಾಗಿದೆ. ಕಾಳಿ ನದಿಯಿಂದ ಕಾರವಾರ ಬಂದರು ಕೇವಲ ಐದು ಕಿಮೀ ವ್ಯಾಪ್ತಿಯಲ್ಲಿದೆ. ಇದರಿಂದ ಈ ಕೈಗಾರಿಕೆಯನ್ನು ಎ ದರ್ಜೆಯದ್ದು ಎಂದು ಪರಿಗಣಿಸಿ ಕೇಂದ್ರ ಪರಿಸರ ಇಲಾಖೆಯಿಂದ ಅನುಮೋದನೆ ಪಡೆಯಬೇಕಿತ್ತು.

ಆದರೆ, ತಪ್ಪು ಮಾಹಿತಿ ನೀಡಿ, ಈ ಯೋಜನೆ ಬಿ ದರ್ಜೆಗೆ ಬರುತ್ತದೆ ಎಂದು ಬಿಂಬಿಸಿ ಕಾಳಿ ನದಿಯ ಸೂಕ್ಷ್ಮ ಪರಿಸರ ವಲಯ ಪರಿಗಣಿಸದೇ ಎಸ್​ಇಐಎಎ ತನ್ನ ವ್ಯಾಪ್ತಿ ಮೀರಿ ಬಂದರು ನಿರ್ವಣದ ಮಹಾ ಯೋಜನೆಗೆ ಪರಿಸರ ಪರವಾನಗಿ ನೀಡಿದೆ. ಅದನ್ನು ರದ್ದು ಮಾಡಬೇಕು ಎಂದು ವಾದ ಮಂಡಿಸಲಾಯಿತು. ಎಲ್ಲವನ್ನೂ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂದು ಮೀನುಗಾರರ ಮುಖಂಡರು ವಿಜಯವಾಣಿಗೆ ತಿಳಿಸಿದ್ದಾರೆ.

ಮುಖಂಡರಾದ ಗಣಪತಿ ಮಾಂಗ್ರೆ, ಕೆ.ಟಿ. ತಾಂಡೇಲ,ರಾಜು ತಾಂಡೇಲ, ಸುಧಾಕರ ಹರಿಕಂತ್ರ, ಶ್ರೀಧರ ಹರಿಕಂತ್ರ, ಸಾಗರ ವಿಜ್ಞಾನಿ ಡಾ.ವಿ.ಎನ್. ನಾಯಕ, ಸೆಂಟರ್ ಫಾರ್ ರೀಸರ್ಚ್ ಸಂಸ್ಥೆಯ ಮಾರುತಿ ನಾಯ್ಕ, ಇತರರು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net