ಪರಿಸರ ನಾಶದಿಂದ ಸಂಕಷ್ಟ ಹೆಚ್ಚು

Parisara
Published on

ಚಿತ್ರದುರ್ಗ: ಪರಿಸರದ ಕುರಿತು ಕಾಳಜಿ ವಹಿಸದೆ, ನಾಶ ಮಾಡುತ್ತ ಹೋದಂತೆಲ್ಲ ಸಂಕಷ್ಟ ಎದುರಾಗುವುದೇ ಹೆಚ್ಚು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರೋಣ ವಾಸುದೇವ್ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ, ಸರ್ಕಾರಿ ಕಲಾ ಕಾಲೇಜಿನಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಸಿ ಬಳಕೆ ಹೆಚ್ಚುತ್ತಿದ್ದು, ಅದರಿಂದ ಹೊರಹೊಮ್ಮುವ ಕ್ಲೋರೋಫೋರೊ ಕಾರ್ಬನ್ ಓಜೋನ್ ಪದರ ಹಾಳಾಗಿ ತಾಪಮಾನ ಏರಿಕೆಗೆ ಕಾರಣವಾಗಿದೆ. ಆದ್ದರಿಂದ ನೈಸರ್ಗಿಕವಾಗಿ ಸಿಗುವ ಗಾಳಿಗೆ ಹೆಚ್ಚು ಒತ್ತು ನೀಡಬೇಕು. ಅದಕ್ಕಾಗಿ ಗಿಡ-ಮರ ಬೆಳೆಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡಿ ಉಳಿಸಿ ಹೋಗುತ್ತೇವೆ. ಅದೇ ರೀತಿ ಮುಂದಿನ ಪೀಳಿಗೆ ಹಿತ ದೃಷಿಯಿಂದ ಪರಿಸರ ಉಳಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ ಮಾತನಾಡಿ, ಭೂ ಭಾಗದ 3/1ರಷ್ಟು ಅರಣ್ಯ ಹೊಂದಿರಬೇಕು. ಇಲ್ಲವಾದಲ್ಲಿ ಹವಮಾನ ವೈಪರೀತ್ಯ ಎದುರಿಸಬೇಕಾಗುತ್ತದೆ. ಇರುವುದೊಂದೇ ಭೂಮಿ ಅದನ್ನು ಸಂರಕ್ಷಿಸಬೇಕು. ಇಲ್ಲದಿದ್ದರೆ, ಜೀವ ಸಂಕುಲ ನಾಶವಾಗುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟರು.

ನ್ಯಾಯಾಧೀಶರಾದ ಎಂ.ವಿಜಯ್, ಗಂಗಾಧರಪ್ಪ ಚನ್ನಬಸಪ್ಪ ಹಡಪದ, ಡಿ.ಮಮತಾ, ಎ.ಎಂ.ಚೈತ್ರಾ, ರಶ್ಮಿ ಎಸ್.ಮುರಡಿ, ಎಸ್.ಅನಿತಾಕುಮಾರಿ, ಆರ್.ಸಹನಾ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ವಲಯ ಅರಣ್ಯಾಧಿಕಾರಿ ಎಚ್.ಉಷಾರಾಣಿ, ಪ್ರಾಂಶುಪಾಲ ಬಿ.ಟಿ.ತಿಪ್ಪೇರುದ್ರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net