ಪರಿಸರ ನಾಶದಿಂದ ಪ್ರಕೃತಿ ವಿಕೋಪ, ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಎಚ್ಚರಿಕೆ, ಕನ್ನಮಂಗಲ ಪಂಚಾಯಿತಿಯಲ್ಲಿ ಪರಿಸರ ದಿನಾಚರಣೆ

0746560f-80ca-4c02-9588-bf31449e7eff
Published on

ಬೆಂಗಳೂರು ಗ್ರಾಮಾಂತರ: ವಿಶ್ವ ಪರಿಸರ ದಿನಾಚರಣೆ ಕೇವಲ ತೋರಿಕೆಯಾಗಬಾರದು. ಅದು ಮಾನವ ಜೀವನದಲ್ಲಿ ಪ್ರಮುಖ ಕರ್ತವ್ಯವಾಗಬೇಕು ಎಂದು ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಹೇಳಿದರು. ಕುಂದಾಣ ಹೋಬಳಿ ಕನ್ನಮಂಗಲ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಟ್ಟು ಮಾತನಾಡಿದರು. ಪರಿಸರ ನಾಶದಿಂದ ಈಗಾಗಲೇ ಸಾಕಷ್ಟು ಪ್ರಕೃತಿ ವಿಕೋಪ ಎದುರಿಸುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಕೆಟ್ಟ ದಿನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಪಂ ಸಾಮಾಜಿಕ ಮತ್ತು ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ, ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಇದನ್ನು ಪರಿಪಾಲಿಸುವ ಕೆಲಸವಾಗಬೇಕು. ಮರಗಿಡಗಳನ್ನು ಬೆಳೆಸಿ ಉಳಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಗ್ರಾಪಂ ಅಧ್ಯಕ್ಷೆ ಲೀಲಾವತಿ ನರಸಿಂಹಮೂರ್ತಿ ಸಸಿಗಳಿಗೆ ನೀರೆರೆಯುವ ಮೂಲಕ ಪರಿಸರ ಸಂರಕ್ಷಣೆ ಸಂದೇಶ ಸಾರಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಸಸಿ ನೆಟ್ಟು ಪೋಷಿಸುವ ಪ್ರತಿಜ್ಞಾವಿಧಿ ಬೋಧಿಸಿದರು. 500 ಸಸಿ ನೆಡುವ ಗುರಿ: ಈ ಬಾರಿಯ ಪರಿಸರ ದಿನಾಚರಣೆ ಅಂಗವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ 500 ಸಸಿ ನೆಟ್ಟು ಪೋಷಿಸುವ ಗುರಿ ಇದೆ ಎಂದು ಕನ್ನಮಂಗಲ ಪಂಚಾಯಿತಿ ಪಿಡಿಒ ಚಂದ್ರಶೇಖರ ಹೇಳಿದರು. ಪರಿಸರ ದಿನದಂದು ಸಾಂಕೇತಿಕವಾಗಿ ಹಲವು ಜಾತಿ ಸಸಿಗಳನ್ನು ಪಂಚಾಯಿತಿ ಆವರಣದಲ್ಲಿ ನೆಡಲಾಗಿದೆ. ರಸ್ತೆ ಬದಿ, ಕೆರೆಗಳ ಸಮೀಪ ಸೇರಿ ಸಾಧ್ಯವಿರುವ ಕಡೆಯಲ್ಲೆಲ್ಲ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕಾಂಗ್ರೆಸ್ ಮುಖಂಡ ಶ್ರೀನಿವಾಸ್, ನರಸಿಂಹಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

ಇಂದು ಕರೊನಾದಂಥ ವಿಚಿತ್ರ ಕಾಯಿಲೆಗಳು ಹರಡುತ್ತಿವೆ. ಮನುಷ್ಯ ಆರೋಗ್ಯವಾಗಿರಲು ಪರಿಸರ ರಕ್ಷಣೆ ಅವಶ್ಯವಾಗಿದೆ. ಪರಿಸರ ಸ್ವಚ್ಛತೆ ಎಲ್ಲರ ಆದ್ಯ ಕರ್ತವ್ಯವಾಗಬೇಕು. ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸುವ ಕಾಳಜಿ ತೋರಬೇಕು. ಎಸ್.ಕೆ.ಮಂಜುನಾಥ್, ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net