ಪರಿಸರ ನಾಶದಿಂದ ಉಸಿರಾಡುವ ಗಾಳಿಗೂ ಕೊರತೆ

Published on

ಗುಂಡ್ಲುಪೇಟೆ: ಇತ್ತೀಚಿನ ದಿನಗಳಲ್ಲಿ ಪರಿಸರ ನಾಶದಿಂದ ಜನತೆ ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಉಸಿರಾಡುವ ಶುದ್ಧ ಗಾಳಿಗೂ ಕೊರತೆಯಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಆತಂಕ ವ್ಯಕ್ತಪಡಿಸಿದರು.

ಗುರುವಾರ ತಾಲೂಕಿನ ಚಿರಕನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಾಲು ಮರ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಅರಣ್ಯ ನಾಶದಿಂದ ಉಸಿರಾಡುವ ಗಾಳಿ ಕೊರತೆಯಾಗುತ್ತಿದೆ. ವನ್ಯಜೀವಿಗಳು ಪಟ್ಟಣ ಪ್ರದೇಶ ಸೇರಿದಂತೆ ಜನವಸತಿ ಪ್ರದೇಶಕ್ಕೂ ಬರುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರದ ಉಳಿವಿಗೆ ಮುಂದಾಗಬೇಕು. ಸಾಲುಮರದ ತಿಮ್ಮಕ್ಕ ಅವರ ಪ್ರೇರಣೆಯಿಂದ ಹಸಿರು ಪ್ರೇಮಿ ವೆಂಕಟೇಶ್ ಸ್ವಾರ್ಥವಿಲ್ಲದೆ ಸಾವಿರಾರು ಸಸಿಗಳನ್ನು ನೆಟ್ಟು ಬೆಳೆಸಿ, ಪೋಷಿಸುವ ಮೂಲಕ ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ತಮ್ಮ ತಂದೆಯವರ ಪುಣ್ಯಸ್ಮರಣೆ ಅಂಗವಾಗಿ ಗ್ರಾಮದಲ್ಲಿ ಸಾಲು ಸಸಿಗಳನ್ನು ನೆಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಗ್ರಾಮಾಂತರ ಪ್ರದೇಶಗಳ ರಸ್ತೆಗಳು ಹಾಗೂ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಲ್ಲಿ ಅನುದಾನದ ಕೊರತೆಯಿಲ್ಲ. ಬೆಲೆ ಏರಿಕೆ ಮುಂತಾದ ಕಾರಣಗಳಿಂದ ನಿರ್ಮಾಣ ವೆಚ್ಚ ಹೆಚ್ಚಳವಾಗುತ್ತಿದೆ. ಇದರಿಂದ ಹಿಂದೆ ಕೈಗೆತ್ತಿಕೊಂಡಿದ್ದ ಹೆಚ್ಚಿನ ಕಾಮಗಾರಿಗಳು ಅಪೂರ್ಣವಾಗಿವೆ. ಆದ್ದರಿಂದ ಪೂರ್ಣ ಅನುದಾನ ಬಂದ ನಂತರ ಎಲ್ಲ ಕಾಮಗಾರಿ ಆರಂಭಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಚನ್ನಬಸಪ್ಪ ಮಾತನಾಡಿ, ಗ್ರಾಮದ ರಸ್ತೆ ಅಭಿವೃದ್ಧಿಪಡಿಸಿ, ಬಸವ ಭವನ ನಿರ್ಮಾಣ ಮಾಡಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು. ತಾಲೂಕಿನಲ್ಲಿ ವರ್ಷಪೂರ್ತಿ ಸಾಧ್ಯವಾದಷ್ಟು ಗಿಡ ನೆಟ್ಟು ಸಾಲು ಮರ ಬೆಳೆಸುವ ಸಂಕಲ್ಪಕ್ಕೆ ಸಂಗಮ ಪ್ರತಿಷ್ಠಾನ, ಚಿತ್ರಕೂಟ ಬಳಗ, ಚಾಮರಾಜನಗರ ಈಶ್ವರಿ ಸೋಷಿಯಲ್ ಟ್ರಸ್ಟ್ ಕೈ ಜೋಡಿಸಿವೆ. ಹಸಿರುಪ್ರೇಮಿ ಸಿ.ಎಂ.ವೆಂಕಟೇಶ್ ಸಾರಥ್ಯದಲ್ಲಿ ಕಾಡಂಚಿನ ಗ್ರಾಮವಾದ ಚಿರಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಾಲು ಮರ ನೆಡುವ ಈ ಪುಣ್ಯ ಕೆಲಸಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಚಾಲನೆ ನೀಡಿದ್ದಾರೆ. ಸಸಿಗಳನ್ನು ಉಳಿಸಿಕೊಳ್ಳುವ ಹೊಣೆಯನ್ನು ಗ್ರಾಮಸ್ಥರು ವಹಿಸಿಕೊಳ್ಳಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಕೆ.ಸಿ.ಸತೀಶ್, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಮೈಸೂರು ಚಾಮರಾಜನಗರ ಜಿಲ್ಲಾ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಮಡಿವಾಳಪ್ಪ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಮಲೆಮಹದೇಶ್ವರಬೆಟ್ಟ ಧರ್ಮದರ್ಶಿ ಮಂಡಳಿಯ ಮಾಜಿ ಅಧ್ಯಕ್ಷ ಡಿ.ಎಸ್.ಸಿದ್ದಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ತಾಲೂಕು ಭೂ ನ್ಯಾಯಮಂಡಳಿಯ ಸದಸ್ಯ ಜಿ.ಕೆ.ಲೋಕೇಶ್, ಮುಖಂಡರಾದ ರವಿ, ನಾಗಪ್ಪ, ರಾಜಪ್ಪ, ಪ್ರಭುಸ್ವಾಮಿ, ಸಂಪತ್ತು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಚಿರಕನಹಳ್ಳಿ ಗ್ರಾಮಸ್ಥರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net