

ಅಥಣಿ: ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಕೊಡುಗೆ ಅವಶ್ಯವಾಗಿದೆ. ಆದ್ದರಿಂದ ಕಾರ್ಖಾನೆ ಆವರಣ ಮತ್ತು ಸುತ್ತಲಿನ ಪ್ರದೇಶದಲ್ಲಿ ೧ ಸಾವಿರ ಸಸಿ ನೆಡಲಾಗುವುದು ಎಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.
ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಗುರುವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಜಾಗೃತಿ ಬಹಳ ಮುಖ್ಯ. ಉತ್ತಮ ಪರಿಸರ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ. ಶಾಲೆ, ಕಾಲೇಜು, ಕಾರ್ಖಾನೆ, ಸರ್ಕಾರಿ ಇಲಾಖೆಯ ಆವರಣ ಸೇರಿ ಮತ್ತಿತರ ಕಡೆಗಳಲ್ಲಿ ಖಾಲಿ ಇರುವ ಸ್ಥಳಗಳಲ್ಲಿ ಸಸಿ ನೆಡುವುದರಿಂದ ವಾತಾವರಣ ಹಸಿರಾಗುವುದಲ್ಲದೆ ಮುಂದಿನ ದಿನಗಳಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಕಾರ್ಖಾನೆಯ ಮುಖ್ಯ ಇಂಜಿನಿಯರ್ ಸಿ.ಎಸ್.ಪಾಟೀಲ, ಸಹಾಯಕ ಅಭಿಯಂತ ಎ.ಜಿ.ಕುಲಕರ್ಣಿ, ಸ್ಟೋರ್ ಕೀಪರ್ ವಿನಾಯಕ ಮನಗೂಳಿ, ಹಿರಿಯ ಸಿಬ್ಬಂದಿಗಳಾದ ಎಸ್.ಎಸ್.ಪಾಟೀಲ, ಎ.ಪಿ.ದೇಶಪಾಂಡೆ, ಆರ್.ವಿ.ಪವಾರದೇಸಾಯಿ, ಎಸ್.ಕುಳೊಳ್ಳಿ, ಆರ್.ವಿ.ನಾವಿ, ಡಿ.ಬಿ.ದೇಸಾಯಿ ಇತರರಿದ್ದರು.