ಪರಿಸರ ಉಳಿಸುವುದು ಎಲ್ಲರ ಕರ್ತವ್ಯ : ಸಂಸದ ಮುನಿಸ್ವಾಮಿ ಹೇಳಿಕ, ಅರಣ್ಯೀಕರಣಕ್ಕೆ ನೀಡಬೇಕಿದೆ ಆದ್ಯತೆ

1
Published on

ಕೋಲಾರ: ಆಧುನಿತೆ ಬೆಳೆದಂತೆಲ್ಲ ನಾಶವಾಗುತ್ತಿರುವ ಪರಿಸರವನ್ನು ಉಳಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಸಂಸದ ಎಸ್​.ಮುನಿಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಅರಣ್ಯ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಇತ್ತೀಚಿಗೆ ಹೆಚ್ಚಾಗಿ ಮಳೆಯಾಗಿದ್ದು, ಹಸಿರು ಹೆಚ್ಚಾಗಿದೆ. 2800 ಕೆರೆಗಳಲ್ಲಿ 2500ಕ್ಕೂ ಹೆಚ್ಚು ಕೆರೆಗಳು ತುಂಬಿಕೊಂಡಿದ್ದು, ಅರಣ್ಯ ಇಲಾಖೆಯಿಂದ ಮತ್ತಷ್ಟು ಸಸಿನೆಟ್ಟು ಅರಣ್ಯೀಕರಣಕ್ಕೆ ಆದ್ಯತೆ ನೀಡಬೇಕಿದೆ ಎಂದರು.

ಶಾಲಾ-ಕಾಲೇಜು, ಪಂಚಾಯಿತಿ ಆವರಣ, ಸರ್ಕಾರಿ ಜಾಗಗಳಲ್ಲಿ ಸಸಿಗಳನ್ನು ಹೆಚ್ಚಾಗಿ ಬೆಳೆಸಬೇಕು. ನೂರು ವರ್ಷ ಆಯಸ್ಸುಳ್ಳ ಮರಗಳಾದ ಅರಳಿ, ಬೇವು, ಹಿಪ್ಪೆ, ಆಲದ ಮರಗಳನ್ನು ಹೆಚ್ಚಾಗಿ ಬೆಳಸಬೇಕು. ಪ್ರಾಣಿಗಳಿಗೆ ಆಹಾರ ಸಿಗುವಂತಹ ಹಣ್ಣಿನ ಸಸಿಗಳನ್ನು ಎಲ್ಲೆಡೆ ನೆಡಬೇಕು. ಪ್ರತಿ ವ್ಯಕ್ತಿ ಕನಿಷ್ಠ 2 ಸಸಿ ನೆಟ್ಟಿ ಬೆಳೆಸಬೇಕು. ಅಮೃತ ಸರೋವರ ಯೋಜನೆಯಲ್ಲಿ ಜಿಲ್ಲೆಯ 75 ಕೆರೆ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾನತಾಡಿ, ಯುವಕರು ಅರಣ್ಯವನ್ನು ಉಳಿಸುವ ಬಗ್ಗೆ ಚಿಂತಿಸಬೇಕು. ಪರಿಸರ ಉಳಿದರೆ ನಾವೆಲ್ಲ ಉಳಿಯುತ್ತೇವೆ ಎಂಬ ಸತ್ಯವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪರಿಸರವೇ ಜೀವನವಾಗಬೇಕು. ಇಂಧನವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಪರಿಸರ ನಾಶವಾಗುತ್ತಿದೆ. ಇದನ್ನು ನಿಯಮಿತವಾಗಿ ಬಳಕೆ ಮಾಡಿ ಪರಿಸರವನ್ನು ರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟ್​ರಾಜಾ ಮಾಡನಾಡಿ, ಸಸಿ ನೆಡುವುದು, ಪರಿಸರ ಸಂಬಂಧಿ ಕಾರ್ಯಕ್ರಮಗಳು ಜೂ 5ಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿದಿನ ಪರಿಸರವನ್ನು ರಕ್ಷಿಸೋಣ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ಲಾಸ್ಟಿಕ್​ ಮುಕ್ತಗೊಳಿಸುವ ಗುರಿ ಹೊಂದಿದ್ದು, ನಾಗರಿಕರು ಹೆಚ್ಚಾಗಿ ಬಟ್ಟೆ ಬ್ಯಾಗ್​ಗಳನ್ನು ಉಪಯೋಗಿಸಿ ಪರಿಸರವನ್ನು ರಕ್ಷಿಸಬೇಕು. ಘನತ್ಯಾಜ್ಯ ಮತ್ತು ಹಸಿ ತ್ಯಾಜ್ಯವನ್ನು ಬೇರ್ಪಡಿಸಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಒಂದೇ ಭೂಮಿ ಘೋಷವಾಕ್ಯದೊಂದಿಗೆ ಈ ವರ್ಷದ ಪರಿಸರ ದಿನಾಚರಣೆ ಆಚರಿಸುತ್ತಿದೇವೆ. ಮಾಲಿನ್ಯ ಮುಕ್ತ ಹಸಿರು ಭೂಮಿಯನ್ನು ರಕ್ಷಿಸುವುದು ನಮ್ಮಲ್ಲರ ಜವಾಬ್ದಾರಿ. ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸಿ ಉಳಿಸುವುದು ಮುಖ್ಯ. ಇಲಾಖೆಗಳು ನೆಟ್ಟ ಸಸಿಗಳನ್ನು ಸಂರಕ್ಷಿಸುವಲ್ಲೂ ಆಸಕ್ತಿ ತೋರಬೇಕು ಎಂದು ತಿಳಿಸಿದರು.

ಅರಣ್ಯ ಉಪ ಸಂರಕ್ಷಣಾಧಿಕಾರಿ ಈ.ಶಿವಶಂಕರ್​, ಸಾಮಾಜಿಕ ಅರಣ್ಯಾಧಿಕಾರಿ ವೆಂಕಟೇಶ್​, ವಲಯ ಅರಣ್ಯಾಧಿಕಾರಿ ವಾಸುದೇವಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್​, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್​ಕುಮಾರ್​ ಇದ್ದರು.

ಬಹುಮಾನ ವಿತರಣೆ: ಪರಿಸರ ದಿನಾಚರಣೆಯ ಅಂಗವಾಗಿ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಪರಿಸರ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net