ಪರಿಸರ ಉಳಿಸಿದರೆ ಮನುಕುಲಕ್ಕೆ ಅಪಾಯವಿಲ್ಲ

ಪರಿಸರ ಉಳಿಸಿದರೆ ಮನುಕುಲಕ್ಕೆ ಅಪಾಯವಿಲ್ಲ
Published on


ಚನ್ನರಾಯಪಟ್ಟಣ : ಪರಿಸರದಿಂದ ಎಲ್ಲವನ್ನು ಪಡೆಯುತ್ತಿರುವ ಮನುಷ್ಯನು ತನ್ನ ದುರಾಸೆಗೆ ಪ್ರಕೃತಿಯನ್ನು ತನಗಿಷ್ಟ ಬಂದಂತೆ ದುರುಪಯೋಗ ಪಡಿಸಿಕೊಳ್ಳುತಿದ್ದಾನೆ ಎಂದು ಸಾಲು ಮರದ ತಿಮ್ಮಕ್ಕ ಆತಂಕ ವ್ಯಕ್ತಪಡಿಸಿದರು.


ಪಟ್ಟಣದ ಶಾಲಿನಿ ವಿದ್ಯಾಸಂಸ್ಥೆಯ ಆವರಣದಲ್ಲಿ ಭೂಮಿ ಉಳಿಸಿ ಆಂದೋಲನಾ, ಸ್ನೇಹ ಬಳಗ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಬೆಳಕು ಹಳೆಯ ವಿದ್ಯಾರ್ಥಿಗಳ ಸೇವಾ ಸಂಘ ಹಾಗೂ ಶ್ರೀ ವಿವೇಕಾನಂದ ಯೋಗಾ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಸಿರು ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಅರಣ್ಯ ಸಂಪತ್ತು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಪರಿಣಾಮ ಪ್ರಕೃತಿಯು ಸಮತೋಲನ ಕಳೆದುಕೊಂಡಿದ್ದು ಈಗಾಗಲೇ ಸಾಕಷ್ಟು ಅಪಾಯಗಳನ್ನು ಎದುರಿಸುತ್ತೊದ್ದೇವೆ. ಸದ್ಯದಿಂದಲೇ ಎಚ್ಚೆತ್ತುಕೊಂಡು ಪರಿಸರವನ್ನು ಉಳಿಸಿ ಬೆಳೆಸಿದರೆ ಮುಂದೆ ತಲೆದೂರಬಹುದಾದ ಅನಾಹುತಗಳನ್ನು ತಪ್ಪಿಸಬಹುದು ಎಂದರು.


ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶಗಳನ್ನು ಯಾವುದೇ ರೀತಿ ಒತ್ತುವರಿಯಾಗದಂತೆ ಸಂರಕ್ಷಿಸಲಾಗಿದೆ. ಇನ್ನು ಕಳೆದ ಆರೇಳು ವರ್ಷಗಳಿಂದಲೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸಸಿಗಳನ್ನು ನೆಡುವ ಕಾರ್ಯ ಹಮ್ಮಿಕೊಂಡಿದ್ದು ಬೆಳೆಸುವಂತೆ ರೈತರಲ್ಲಿಯೂ ಉತ್ತೇಜನ ನೀಡಲಾಗಿದೆ ಎಂದರು.


ಪರಿಸರ ಪ್ರೇಮಿ ಸಿ.ಎನ್.ಅಶೋಕ್ ಮಾತನಾಡಿ, ಕಾಡುಕೃಷಿ ಅಳವಡಿಕೆಯಿಂದ ಆರ್ಥಿಕ ಲಾಭದ ಜತೆಗೆ ಮಣ್ಣಿನಲ್ಲಿ ಫಲವತ್ತತೆಯೂ ಹೆಚ್ಚಾಗಲಿದೆ. ಆದರೆ ಕೃಷಿ ಚಟುವಟಿಕೆಯಲ್ಲಿ ಹೆಚ್ಚು ರಸಗೊಬ್ಬರ ಉಪಯೋಗಿಸುತ್ತಿರುವ ಪರಿಣಾಮ ಮಣ್ಣಿನಲ್ಲಿ ಸೂಕ್ಷ್ಮಜೀವಿಗಳು, ಪೋಷಕಾಂಶ ಹಾಗೂ ಫಲವತ್ತತೆ ಕಡಿಮೆಯಾಗುತ್ತಿದ್ದು ಹೀಗೆಯೇ ಮುಂದುವರಿದರೆ ಕೆಲವಾರು ವರ್ಷಗಳಲ್ಲಿ ಮರುಭೂಮಿಯಾದರೂ ಆಶ್ಚರ್ಯವೇನಿಲ್ಲ ಎಂದರು.


ಇದಕ್ಕೂ ಮೊದಲು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಕೋರಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ವ್ಯಾಪ್ತಿ ರೈತರಿಗೆ 30 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಪರಿಸರ ಪ್ರೇಮಿ ಬಳ್ಳೂರು ಉಮೇಶ್, ಶಾಲಿನಿ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಎನ್.ನಂಜುಂಡೇಗೌಡ, ಸೇವಾ ದಳದ ರಾಣಿಯಮ್ಮ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net