ಪರಿಸರ ಇಲಾಖೆಗೆ ಸರ್ಕಾರದಿಂದ ಅರ್ಜಿ ಸಲ್ಲಿಕೆ

17KWR2
Published on

ಸುಭಾಸ ಧೂಪದಹೊಂಡ ಕಾರವಾರ

ಮಾಜಾಳಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ ಸಂಬಂಧ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಕೇಂದ್ರ ಪರಿಸರ ಇಲಾಖೆಯಿಂದ ಪರಿಸರ, ಹಾಗೂ ಸಿಆರ್​ರೆಡ್ ಅನುಮತಿ ಪಡೆಯಲು ಟಿಒಆರ್​ಗಾಗಿ ಅರ್ಜಿ ಸಲ್ಲಿಸಲಾಗಿದೆ.

ಮಾಜಾಳಿ ಗ್ರಾಮದಲ್ಲಿ ಬಂದರು ನಿರ್ಮಾಣ ಮಾಡಬೇಕಾದ ಸ್ಥಳ ಕರ್ನಾಟಕ-ಗೋವಾ ಗಡಿ ಪ್ರದೇಶದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಇರುವುದರಿಂದ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯ. ಪರವಾನಗಿಗಾಗಿ ಪರಿಸರ ಅಧ್ಯಯನ ವರದಿ ಸಿದ್ಧಪಡಿಸಬೇಕಿದ್ದು, ಅದನ್ನು ಪುಣೆಯ ಮೆಕಾನ್ ಇಂಡಿಯಾ ಎಂಬ ಕಂಪನಿಗೆ 19.5 ಲಕ್ಷ ರೂ.ಗೆ ವಹಿಸಲಾಗಿದೆ. ಕಂಪನಿ ಅಧ್ಯಯನಕ್ಕೂ ಪೂರ್ವದಲ್ಲಿ ಕೇಂದ್ರ ಪರಿಸರ ಇಲಾಖೆಯಿಂದ ಮಾರ್ಗದರ್ಶಿ ಸೂತ್ರ (ಟಿಒಆರ್) ಪಡೆಯಬೇಕು. ಅದಕ್ಕಾಗಿ ಮೀನುಗಾರಿಕೆ ಉಪ ನಿರ್ದೇಶಕರು ಸರ್ಕಾರದ ಪರವಾಗಿ ಕೇಂದ್ರ ಪರಿಸರ ಮಂತ್ರಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಜಾಗದ ಗೊಂದಲ: 200 ಕೋಟಿ ರೂ. ವೆಚ್ಚದಲ್ಲಿ ಕಾಗೆ ಗುಡ್ಡದ ಸಮೀಪ ದೋಣಿಗಳು ನಿಲ್ಲುವ ದಕ್ಕೆ ಹಾಗೂ ಇತರ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ. ಇದರಲ್ಲಿ ತಿಳಮಾತಿ ಕಡಲ ತೀರದ ಸಮೀಪದಿಂದ ಅಲೆ ತಡೆಗೋಡೆ ಕಾಮಗಾರಿಯೂ ಸೇರಿದೆ. ಆದರೆ, ಬಂದರು ನಿರ್ವಣದ ಸ್ಥಳದ ಬಗ್ಗೆ ಮೀನುಗಾರರಲ್ಲಿ ಆಕ್ಷೇಪವಿದೆ. ದೇವಬಾಗ ಭಾಗದಲ್ಲಿ ಬಂದರು ನಿರ್ವಿುಸಬೇಕು ಎಂದು ಕೆಲವರು, ದಾಂಡೇಬಾಗದಲ್ಲಿ ನಿರ್ಮಾಣ ಮಾಡಬೇಕು ಎಂದು ಇನ್ನು ಕೆಲವರು ಒತ್ತಾಯಿಸುತ್ತಿದ್ದಾರೆ. ಇಂಜಿನಿಯರ್​ಗಳು ಸ್ಥಳ ಪರಿಶೀಲನೆ ನಡೆಸಿದ್ದು, ಅದರ ಆಧಾರದ ಮೇಲೆಯೇ ಬಂದರು ನಿರ್ವಣಕ್ಕೆ ಯೋಜನೆ ರೂಪಿಸುವುದಾಗಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜು ತಿಳಿಸಿದ್ದಾರೆ.

ದಶಕಗಳ ಯೋಜನೆ
ಮಾಜಾಳಿಯಲ್ಲಿ ಮೀನುಗಾರಿಕೆ ಬಂದರು ನಿರ್ವಣದ ಯೋಜನೆ ಇಂದು ನಿನ್ನೆಯದಲ್ಲ. ಈ ಹಿಂದೆಯೇ ಬಂದರು ನಿರ್ವಣಕ್ಕೆ ಒಮ್ಮೆ ಅಡಿಗಲ್ಲು ಹಾಕಲಾಗಿತ್ತು. ಆದರೆ, ಕಾಮಗಾರಿ ಮಾತ್ರ ಮಾಡಿಲ್ಲ ಎನ್ನುತ್ತಾರೆ ಮಾಜಾಳಿಯ ಮೀನುಗಾರ ಆನಂದು ಸೈಲ್ ಎಂಬುವವರು. ಆನಂದ ಅಸ್ನೋಟಿಕರ್ ಅವರು ಮೀನುಗಾರಿಕೆ ಸಚಿವರಾಗಿದ್ದ ಅವಧಿಯಲ್ಲಿ (2009-2013) ಬಂದರು ನಿರ್ವಣಕ್ಕೆ ಪ್ರಸ್ತಾವನೆ ಸಿದ್ಧವಾಗಿತ್ತು. ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net