ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಇಂದು ಮತದಾನ

CTD 0001..
Published on

ಚಿತ್ರದುರ್ಗ:ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಇಂದು ಬೆಳಗ್ಗೆ ಎಂಟರಿಂದ ಮತದಾನ ಆರಂಭವಾಯಿತು. ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಲ್ಲಿ ಎರಡು ಮತಗಟ್ಟೆಗಳು ಸೇರಿ ಜಿಲ್ಲೆಯಲ್ಲಿ ಏಳು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಜಿಲ್ಲೆಯ ಆರು ತಾಲೂಕುಗಳ ಪೈಕಿ ಚಿತ್ರದುರ್ಗ ಹೊರತು ಪಡಿಸಿ,ಐದರಲ್ಲಿ ತಲಾ ಒಂದೊಂದು ಮತಗಟ್ಟೆಗಳಿದ್ದು, ಸಂಜೆ 4ರವರೆಗೆ ಮತದಾನ ನಡೆಯಲಿದೆ.ಜಿಲ್ಲೆಯಲ್ಲಿ 3442 ಪುರುಷರು ಮತ್ತು 1471ಮಹಿಳೆಯರು ಸೇರಿ 4913ಮತದಾರರಿದ್ದಾರೆ.

ಜೂ.2ರಂದು ಮಸ್ಟರಿಂಗ್ ನಡೆದಿದ್ದು ಇಂದು ಮತದಾನ ಪೂರ್ಣಗೊಂಡ ಬಳಿಕ ಜಿಲ್ಲಾ ಕೇಂದ್ರದಲ್ಲಿ ಡಿಮಸ್ಟರಿಂಗ್ ನಡೆಯ ಲಿದೆ. ಆನಂತರದಲ್ಲಿ ಬಳಿಕ ಬೆಂಗಳೂರಿನ ಸರ್ಕಾರಿ ಆರ್ಟ್ಸ್ ಕಾಲೇಜಿಗೆ ಮತಪೆಟ್ಟಿಗೆಗಳನ್ನು ರವಾನಿಸಲಾಗುತ್ತದೆ. ಜೂ.6ರಂದು ಅಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ ಚಿತ್ರದುರ್ಗ ಮತಗಟ್ಟೆ ಸಂಖ್ಯೆ ಆರು ಮತ್ತು ಆರು ಎಗೆ ತಹಸೀಲ್ದಾರ್ ಡಾ.ನಾಗವೇಣಿ ಭೇಟಿ ನೀಡಿ ಪರಿಶೀಲಿಸಿದರು.

ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ನಾಲ್ಕನೇ ಬಾರಿ ಆಯ್ಕೆ ಬಯಸಿ ಕಣದಲ್ಲಿದ್ದರೆ,ಕಾಂಗ್ರೆಸ್ಸಿನಿಂದ ಡಿ.ಟಿ. ಶ್ರೀನಿ ವಾಸ್ ಸ್ಪರ್ಧಿಸಿದ್ದಾರೆ. ಮೈತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರು ಮತಗಟ್ಟೆ ಸಮೀಪದಲ್ಲಿ ಬೀಡು ಬಿಟ್ಟಿದ್ದು, ಕೊನೆ ಕ್ಷಣದಲ್ಲಿ ಮತದಾರರ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ. ಬೆಳಗ್ಗೆ ಚಿತ್ರದುರ್ಗದಲ್ಲಿ ಮತದಾನ ಆರಂಭವಾದ ಅರ್ಧಗಂಟೆಯೊಳಗೆ 54 ಪುರುಷ ಹಾಗೂ 19 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದರು.

ಮತಗಟ್ಟೆಗಳ ವಿವರ
ಮೊಳಕಾಲ್ಮೂರು-ತಾಲೂಕು ಆಡಳಿತ ಸೌಧ
ಚಳ್ಳಕೆರೆ-ಬಿಎಂಜಿಎಚ್‌ಎಸ್ ಶಾಲೆ
ಚಿತ್ರದುರ್ಗ-ಬಾಲಕಿಯರ ಸರ್ಕಾರಿ ಪಪೂ ಕಾಲೇಜು ಕೊಠಡಿ ಸಂಖ್ಯೆ 1 ಮತ್ತು 2.
ಹಿರಿಯೂರು-ತಾಲೂಕು ಆಡಳಿತ ಸೌಧ
ಹೊಸದುರ್ಗ-ತಾಲೂಕು ಕಚೇರಿ ಸಭಾಂಗಣ
ಹೊಳಲ್ಕೆರೆ-ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net