ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು

17BK1
 ಬಸವಕಲ್ಯಾಣದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರವನ್ನು ಶ್ರೀ ಅದ್ವೈತಾನಂದ ಮಹಾಸ್ವಾಮೀಜಿ ಉದ್ಘಾಟಿಸಿದರು. ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ, ಶಿಕ್ಷಣ ತಜ್ಞ ಗುರುರಾಜ ಕರಜಗಿ, ಬಸವರಾಜ ಕೋರಕೆ, ಶಶಿಕಾಂತ ದುರ್ಗೆ, ಚನ್ನಬಸವ ಬಳತೆ, ವಿವೇಕಾನಂದ ಹೊದಲೂರೆ ಇದ್ದರು.
Published on

ಬಸವಕಲ್ಯಾಣ: ಮಾಡುವ ಕೆಲಸದಲ್ಲಿ ವಿಶ್ವಾಸ, ಕಠಿಣ ಪರಿಶ್ರಮವಿದ್ದರೆ ಯಶಸ್ಸಿನ ದಾರಿ ಸುಲಭವಾಗುತ್ತದೆ. ನಿರ್ಲಕ್ಷ್ಯ ಮಾಡದೆ ನಿರಂತರ ಅಭ್ಯಾಸ ಮಾಡುವುದರ ಜತೆಗೆ ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಸಫಲತೆ ಕಾಣಲು ಸಾಧ್ಯ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಹೇಳಿದರು.

ನಗರದ ರಥ ಮೈದಾನದ ಸಭಾ ಭವನದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಲೋಕದ ಚಲನೆ, ವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಾಕೃತಿಕ ಚೈತನ್ಯವನ್ನು ನಾವೆಲ್ಲರೂ ನಂಬಲೇಬೇಕು ಎಂದರು.

ಎಲ್ಲರಲ್ಲಿ ಚೈತನ್ಯ ಶಕ್ತಿ ಅಡಗಿರುತ್ತದೆ. ಆದರೆ ಅದನ್ನು ಜಾಗೃತಗೊಳಿಸಿ ಸಾಧನೆ ಮಾಡಬೇಕಿದೆ. ಜ್ಞಾನ, ಕೌಶಲ ಮತ್ತು ನಡತೆ ಮುಖ್ಯ. ಏನೆಲ್ಲ ಸಾಧನೆ ಮಾಡಿದರೂ ಮನುಷ್ಯತ್ವ ಇಲ್ಲವಾದರೆ ಸಮಾಜದಲ್ಲಿ ಬೆಲೆ ಇಲ್ಲ. ತಮಗಾಗಿ ಬದುಕದೆ ಸಮಾಜಕ್ಕಾಗಿ ಬದುಕಿದವರ ಹೆಸರು ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಕೆಟ್ಟ ಚಟಗಳಿಗೆ ಆಕರ್ಷಿತರಾಗದೆ ಅರೋಗ್ಯ ಕಾಪಾಡಿಕೊಂಡು ಪರಿಶ್ರಮದ ಮೂಲಕ ತಮ್ಮ ಬದುಕು ರೂಪಿಸಿಕೊಂಡು ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡುವವರು ನೀವಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಅದ್ವೈತಾನಂದ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತಿ ಕೇವಲ ಆಧ್ಯಾತ್ಮಿಕ ಲೋಕಕ್ಕಷ್ಟೇ ಸೀಮಿತವಾಗಿಲ್ಲ. ಬದುಕಿನ ಎಲ್ಲ ವಲಯದಲ್ಲಿ ಭಕ್ತಿ ಅಗತ್ಯವಿದೆ. ಅಧ್ಯಯನ ಭಕ್ತಿ-ಶ್ರದ್ಧೆಯಿಂದ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.

ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಬಸವಕಲ್ಯಾಣ ಕ್ಷೇತ್ರ ಸಮಿತಿ ಮುಖ್ಯ ಸಂಚಾಲಕರಾದ ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಯುವ ಮುಖಂಡ ಚನ್ನಬಸವ ಬಳತೆ, ಸಿಪಿಐ ಅಲಿಸಾಬ್, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಮಲ್ಲಯ್ಯ ಹಿರೇಮಠ, ಜಗನ್ನಾಥ ಖೂಬಾ, ಅಶೋಕ ನಾಗರಾಳೆ, ಕಾಶಪ್ಪ ಸಕ್ಕರಭಾವಿ, ಶ್ರೀಕಾಂತ ಬಡದಾಳೆ, ಅನೀಲಕುಮಾರ ರಗಟೆ, ವಿಶ್ವಸ್ಥರಾದ ಶಿವರಾಜ ಶಾಶೆಟ್ಟೆ, ಸೋಮಶೇಖರಯ್ಯ ವಸ್ತ್ರದ, ಮಲ್ಲಿನಾಥ ಮಂಠಾಳೆ ಇತರರಿದ್ದರು.

ಬಿಡಿಪಿಸಿ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ ಸ್ವಾಗತಿಸಿದರು. ಸಂಗೀತಾ ಮಹಾಗಾಂವೆ ವಂದಿಸಿದರು. ಡಾ.ಬಸವರಾಜ ಖಂಡಾಳೆ ನಿರೂಪಣೆ ಮಾಡಿದರು.

ಜಗತ್ತಿನಲ್ಲಿ ಒಂದು ದೊಡ್ಡ ಶಕ್ತಿಯಿದೆ. ಭೂಗೋಳ, ನಿಸರ್ಗ, ಆಕಾಶಕಾಯ ಸೇರಿ ಎಲ್ಲವೂ ತನ್ನ ಕೆಲಸ ತಾನೇ ಮಾಡುವಂತಹ ಚೈತನ್ಯವಿದೆ. ಪ್ರಕೃತಿಯನ್ನು ನಿಯಂತ್ರಿಸುವ ಮತ್ತು ಪ್ರಕೃತಿ ವ್ಯವಸ್ಥೆ ಕಾಪಾಡುವ ಚೇತನವನ್ನೇ ನಾವು ದೇವರೆಂದು ಕರೆದಿದ್ದೇವೆ. ಅಧಿಕಾರ, ಸಂಪತ್ತು ನೆಮ್ಮದಿ ಮತ್ತು ಸಂತೋಷ ಹಾಳು ಮಾಡುವ ಸಂಗತಿಗಳು. ನಿಮ್ಮ ಜ್ಞಾನ ಮತ್ತು ಕೌಶಲ ಸಮಾಜಕ್ಕೆ ಉಪಯೋಗವಾಗುವಂತಿರಲಿ.

| ಡಾ.ಗುರುರಾಜ ಕರಜಗಿ ಶಿಕ್ಷಣ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net