ಪರಿಶ್ರಮದಿಂದ ಓದಿದರೆ ಮಾತ್ರ ಸಾಧನೆ

fathima
Published on

ಕಲಬುರಗಿ: ಜೀವನ ಎಂಬುದೇ ಕಲಿಕೆ. ಶಿಕ್ಷಕ ಮತ್ತು ವಿದ್ಯಾರ್ಥಿ ಪ್ರತಿಕ್ಷಣ ಕಲಿಯುತ್ತಲೇ ಇರಬೇಕು. ಸಾಧನೆಗೆ ಶಾರ್ಟ್ ಕಟ್ ಮಾರ್ಗಗಳಿಲ್ಲ. ಕಠಿಣ ಪರಿಶ್ರಮ ಜತೆಗೆ ಕಷ್ಟುಪಟ್ಟು ಓದಿದರೆ ಮಾತ್ರ ಸಾಧಕರಾಗಲು ಸಾಧ್ಯ ಎಂದು ದಂತ ವೈದ್ಯ ಸಹೋದರರಾದ ಡಾ.ಸುಧೀಂದ್ರ ದೇಶಪಾಂಡೆ, ಡಾ.ಸಚಿನ್ ದೇಶಪಾಂಡೆ ಮತ್ತು ಸುಮೀತ್ ದೇಶಪಾಂಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶ್ರೀಗುರು ಸ್ವತಂತ್ರ ಪಿಯು ವಿಜ್ಞಾನ ಕಾಲೇಜಿನಿಂದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಿರ್ದಿಷ್ಟ ಗುರಿಯೊಂದಿಗೆ ಗುರುವಿನ ಮಾರ್ಗದರ್ಶನದಲ್ಲಿ ನಿರಂತರ ಓದುತ್ತ ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆದರೆ ಖಂಡಿತವಾಗಿಯೂ ಸಾಧಕರಾಗುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಡಾ.ಸುಧೀಂದ್ರ ಮಾತನಾಡಿ, ಸಾಧಿಸುವ ಛಲ ಇರಬೇಕು. ಸಮಾಜದ ಮುಖ್ಯ ವಾಹಿನಿಯಲ್ಲಿ ಇರಲು ನಿಮ್ಮ ಸ್ಟ್ರೆಂಥ್ ಏನು? ವೀಕ್ನೆಸ್ ಏನು ಎಂಬುದನ್ನು ನೀವೇ ಅರಿತು ಮುಂದಡಿ ಇಡಬೇಕು. ನಿಮ್ಮಲ್ಲಿರುವ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡು ಸಾಧನೆಯತ್ತ ಹೆಜ್ಜೆ ಹಾಕಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಈ ಸಂಸ್ಥೆ ಸಂಸ್ಥಾಪಕರಾಗಿದ್ದ ದಿವಂಗತ ಪ್ರೊ.ಎ.ವೈ. ನಾಯ್ಕ್ ೧೯೮೫ರಲ್ಲಿ ನಮಗೆ ಸ್ಫೂರ್ತಿ ನೀಡಿದವರು. ಸರ್ಕಾರಿ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿಲು ಉತ್ತರ ಕನ್ನಡದಿಂದ ಕಲಬುರಗಿಗೆ ಆಗಮಿಸಿ ಅಪಾರ ಕೊಡುಗೆ ನೀಡಿದ್ದಾರೆ. ಅವರು ಸ್ಥಾಪಿಸಿರುವ ಶ್ರೀಗುರು ಕಾಲೇಜಿನಿಂದ ನೂರಾರು ವಿದ್ಯಾರ್ಥಿಗಳು ಸಾಧಕರಾಗಿ ಹೊರಹೊಮ್ಮಿದ್ದು ಹೆಮ್ಮೆ ವಿಷಯ. ನಾಯ್ಕ್ ಸರ್ ಟ್ಯೂಷನ್ ಹೇಳುವಾಗ ಹೆಚ್ಚಿನ ಅಂಕ ಪಡೆದವರಿಗೆ ೧೦ ರೂ. ಬಹುಮಾನ ನೀಡುತ್ತಿದ್ದರು ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು. ನಾವು ಮೂವರು ಸಹೋದರರು ವೈದ್ಯರಾಗಲು ನಾಯ್ಕ್ ಸರ್ ಅವರೇ ಕಾರಣರು ಎಂದು ಸ್ಮರಿಸಿದರು.

ಮಾತೋಶ್ರೀ ಕಲ್ಯಾಣಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ನಳಿನಿ ನಾಯ್ಕ್, ಕಾರ್ಯದರ್ಶಿ ನಿತೀನ್ ನಾಯ್ಕ್, ಆಡಳಿತಾಧಿಕಾರಿ ನೇಹಾ ನಿತೀನ್ ನಾಯ್ಕ್, ಆಡಳಿತ ಮಂಡಳಿ ಸದಸ್ಯ ಗುರುರಾಜ ನಾಯ್ಕ್, ಪ್ರಾಚಾರ್ಯ ವಿದ್ಯಾಸಾಗರ ಗೋಗಿ ಅವರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net