ಪರಿಶ್ರಮ, ಪ್ರಾಮಾಣಿಕತೆಯೇ ಯಶಸ್ಸಿನ ಗುಟ್ಟು

24blk2
Published on

ಭಾಲ್ಕಿ: ವಿದ್ಯಾರ್ಥಿಗಳು ಪರಿಶ್ರಮ, ಪ್ರಾಮಾಣಿಕತೆ ಮತ್ತು ಸರಳತೆ ಎಂಬ ಮೂರು ಸೂತ್ರ ಅನುಸರಿಸಿದರೆ ಜೀವನದಲ್ಲಿ ಯಶಸ್ಸು ಕಾಣುವುದರ ಜತೆಗೆ ಅಂದುಕೊಂಡ ಕನಸು ಸಹ ನನಸಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜು ಆಯೋಜಿಸಿದ್ದ 2023ರ ನೀಟ್-ಐಐಟಿ ಸಾಧಕರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದುಳಿದ ಪ್ರದೇಶದ ಕಲ್ಯಾಣಕ್ಕಾಗಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ವಿದ್ಯಾ ಮಂದಿರ ತೆರೆದು ಭೇದಭಾವ ಇಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ನೀಡುತ್ತಿದ್ದಾರೆ. 40 ಮಕ್ಕಳಿಂದ ಆರಂಭವಾದ ಶಿಕ್ಷಣ ಸಂಸ್ಥೆಯಲ್ಲಿಂದು 20 ಸಾವಿರ ಮಕ್ಕಳು ಅಭ್ಯಸಿಸುತ್ತಿರುವುದು ಗಮನಾರ್ಹ. ಶ್ರೀಗಳ ಅವಿರತ ಶ್ರಮದಿಂದಾಗಿ ಸರ್ಕಾರಕ್ಕೂ ಆಗದಂಥ ಕೆಲಸಗಳು ಇಲ್ಲಿ ನಡೆದಿವೆ ಎಂದು ಬಣ್ಣಿಸಿದರು.
ಶ್ರೀ ಚನ್ನಬಸವೇಶ್ವರ ಗುರುಕುಲ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಪ್ರತಿವರ್ಷ ನೀಟ್, ಐಐಟಿ ಸೇರಿ ವಿವಿಧ ಕೋಸ್೯ಗಳಲ್ಲಿ ಉತ್ತಮ ರ್ಯಾಂಕ್ ಪಡೆದು ರಾಷ್ಟ್ರದ ಗಮನ ಸೆಳೆಯುತ್ತಿರುವುದು ಕಲ್ಯಾಣ ಕರ್ನಾಟಕದ ಹೆಮ್ಮೆ. ಗುಣಮಟ್ಟದ ಶಿಕ್ಷಣ, ಸಂಸ್ಕಾರ, ಉತ್ತಮ ಪರಿಸರ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇಂತಹ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಹೆಚ್ಚೆಚ್ಚು ರಂಗಗಳಲ್ಲಿ ಸಾಧನೆ ಮಾಡಬೇಕು ಎಂದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸಣ್ಣ ಪ್ರಮಾಣದಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ ಸಂಸ್ಕಾರದೊಂದಿಗೆ ಮುನ್ನಡೆಯುತ್ತಿದೆ. ಮಕ್ಕಳಲ್ಲಿ ಜ್ಞಾನದೊಂದಿಗೆ ಸಂಸ್ಕೃತಿ ಬಿತ್ತುತ್ತಿದೆ. ಶಿಕ್ಷಣ ನಮ್ಮನ್ನು ಬದಲಾಯಿಸುವ ಪ್ರಮುಖ ಅಸ್ತ್ರ ಎಂಬುದನ್ನು ಅರಿತು ಮುನ್ನಡೆಯಲಾಗುತ್ತಿದೆ ಎಂದರು.
ಧರ್ಮ ಪ್ರಚಾರ-ಪ್ರಸಾರದ ಜತೆಗೆ ಗಡಿ ಭಾಗದ ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಬಸವ ಗುರುವಿನ ಶಕ್ತಿ, ನಮ್ಮ ಗುರುಗಳ ಆಶೀರ್ವಾದಿಂದ ರಾಜ್ಯದಲ್ಲಿಯೇ ವಿಶಿಷ್ಟವಾಗಿ ಗುರುತಿಸಿಕೊಂಡು ದೊಡ್ಡದಾಗಿ ಬೆಳೆದಿದೆ. ಇದರ ಹಿಂದೆ ಎಲ್ಲರ ಶ್ರಮವಿದೆ ಎಂದು ಹೇಳಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ನಿಜವಾದ ಭಾರತ ಹಳ್ಳಿಗಳಲ್ಲಿದೆ. ಹಳ್ಳಿ ಅಭಿವೃದ್ಧಿ ಆದರೆ ದೇಶದ ಪ್ರಗತಿ ಎನ್ನುವಂತೆ ನಮ್ಮ ಪರಮ ಪೂಜ್ಯರು ಗ್ರಾಮೀಣ ಭಾಗದಲ್ಲಿ ವಿದ್ಯಾ ಸಂಸ್ಥೆ ಆರಂಭಿಸಿದ್ದರ ಪರಿಣಾಮ ಬಡವರು, ಕೂಲಿ-ಕಾರ್ಮಿಕರು, ರೈತರ ಮಕ್ಕಳು ಶಿಕ್ಷಣದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಾಗರ ಈಶ್ವರ ಖಂಡ್ರೆ ಬಸವ ಪೂಜೆ ನೆರವೇರಿಸಿದರು. ಸಂಸ್ಥೆ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟೆ, ವಿಟಿಯು ಪ್ರಾದೇಶಿಕ ಕೇಂದ್ರದ ನಿದರ್ೇಶಕ ಬಸವರಾಜ ಗಾದಗಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ನಿವೃತ್ತ ಇಂಜಿನಿಯರ್ ಸಿದ್ದಯ್ಯ ಕಾವಡಿಮಠ ಇತರರಿದ್ದರು.
ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು. ಆಡಳಿತಾಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವಕರ್ ನಿರೂಪಣೆ ಮಾಡಿದರು. ಉಪ ಪ್ರಾಂಶುಪಾಲ ಸಿದ್ರಾಮ ಗೊಗ್ಗಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net