

ಕುಶಾಲನಗರ: ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಪರಿಶ್ರಮ, ಧೈರ್ಯ ಮತ್ತು ಬುದ್ಧಿವಂತಿಕೆ ಅಗತ್ಯ. ಇದನ್ನು ಯಾರು ಅಳವಡಿಸಿಕೊಳ್ಳುತ್ತಾರೋ ಅಂತಹವರಿಗೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ನಿವೃತ್ತ ಉಪನ್ಯಾಸಕ ಜಗದೀಶ್ ಲಕ್ಷ್ಮೀಕಾಂತಯ್ಯ ತಿಳಿಸಿದರು.
ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಬನಶಂಕರಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಹೆಬ್ಬಾಲೆ ಪ್ರೌಢಶಾಲೆ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮನೋಬಲ, ಆತ್ಮಸ್ಥೈರ್ಯ ಮತ್ತು ವ್ಯಕ್ತಿತ್ವ ವಿಕಸನ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸತತ ಅಭ್ಯಾಸ ವಿದ್ಯಾರ್ಥಿಗಳ ಪ್ರಮುಖ ಲಕ್ಷಣ. ತಾವು ಕಲಿತ ಶಾಲೆಯೇ ತನ್ನ ಸಾಧನೆಗೆ ಅಡಿಪಾಯ ಎಂದು ಶಾಲೆ ಮತ್ತು ಶಿಕ್ಷಕರನ್ನು ಸ್ಮರಿಸಿದರು.
ದೃಶ್ಯ ಮಾಧ್ಯಮದ ಮೂಲಕ ಮಹಾನ್ ನಾಯಕರ ಪರಿಚಯ ಮಾಡಿಕೊಟ್ಟರು. ವಿವಿಧ ಪ್ರಯೋಗಗಳ ಮೂಲಕ ವಿಜ್ಞಾನವನ್ನು ಪರಿಚಯಿಸಿದರು.
ಬನಶಂಕರಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, 10ನೇ ತರಗತಿ ವಿದ್ಯಾರ್ಥಿಗಳು ಅನ್ಯ ಮಾರ್ಗ ವನ್ನು ಅನುಸರಿಸದೆ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಓದಿ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಬೇಕು. ಕನ್ನಡ ಮಾಧ್ಯಮ ಎನ್ನುವ ಕೀಳರಿಮೆ ಬಿಟ್ಟು ನಿರಂತರವಾಗಿ ಅಭ್ಯಾಸ ಮಾಡಿದರೆ ಯಶಸ್ಸು ಶತಸಿದ್ಧ. ಸಮಯಪಾಲನೆಯೊಂದಿಗೆ ಶಿಕ್ಷಕರು ಹೇಳಿಕೊಡುವುದನ್ನು ಗಮನವಿಟ್ಟು ಕೇಳಿಸಿಕೊಳ್ಳುವುದರ ಜತೆಗೆ ಅರಿತು ಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಭಾರದ್ವಾಜ್ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಿರಬೇಕು. ಆ ಗುರಿ ಮುಟ್ಟಲು ಗುರು-ಹಿರಿಯರ ಮಾರ್ಗದರ್ಶನ ಅಗತ್ಯ ಎಂದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಲ್.ರಮೇಶ್, ಕಸಾಪ ಖಜಾಂಚಿ ಉಮೇಶ್ ಭಟ್, ನಿವೃತ್ತ ಯೋಧ ಪುಟ್ಟೇಗೌಡ, ಉದಯ್, ನಾಗೇಂದ್ರ, ಶಾಂಭಶಿವಮೂರ್ತಿ, ಜವಹಾರ್ ನವೋದಯ ಶಾಲೆಯ ಶಿಕ್ಷಕ ಅರುಣ್ ಕುಮಾರ್, ಜೀವನ್, ಮುಖ್ಯ ಶಿಕ್ಷಕ ಬಸವರಾಜ್ ಶೆಟ್ಟಿ, ಶಿಕ್ಷಕರಾದ ವೆಂಕಟ್‌ನಾಯಕ್, ಸಿ.ಡಿ.ಲೋಕೇಶ್ ಹಾಜರಿದ್ದರು.