

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ಕರ್ನಾಟಕದಲ್ಲಿ ಕಡಿಮೆ ಆಗಿದ್ದು, ಹೆಚ್ಚು ಹೆಚ್ಚು ಜನರು ಪರೀಕ್ಷೆ ತೆಗೆದುಕೊಂಡು ಪರಿಶ್ರಮದಿಂದ ಉತ್ತೀರ್ಣರಾಗಬೇಕು ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 448ನೇ ರ‌್ಯಾಂಕ್ ಪಡೆದ ನಗರದ ಡಾ.ಭಾನುಪ್ರಕಾಶ್ ಸಲಹೆ ನೀಡಿದರು.
ಹಿನಕಲ್ ಗ್ರಾಮದ ಮುಖಂಡರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬೆಳವಾಡಿಯ ಸರ್ಕಾರಿ ಶಾಲೆಯಲ್ಲಿ ನಾನು 1 ರಿಂದ 5ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದೇನೆ. ಸರ್ಕಾರಿ ಶಾಲೆಯಲ್ಲಿ ಓದಿದವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಕಡಿಮೆ ಇದ್ದು, ಹೆಚ್ಚು ಹೆಚ್ಚು ಪದವೀಧರರು ರಾಜ್ಯದಿಂದಲೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು ಎಂದು ಸಲಹೆ ನೀಡಿದರು.
ಕೇವಲ ಒಂದು ಬಾರಿ ಪರೀಕ್ಷೆ ಬರೆದರೆ ಸಾಲದು. ಪ್ರಯತ್ನ, ಶ್ರಮ, ಶ್ರದ್ಧೆ ನಿರಂತರವಾಗಿದ್ದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ಸಮಾಜದ ವಿದ್ಯಾವಂತ ಪದವೀಧರರು ಹೆಚ್ಚಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸರ್ಕಾರದ ಸೇವೆಗೆ ಸೇರಬೇಕು. ನಿಮ್ಮ ಈ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದರು.
ಹಿನಕಲ್ ಗ್ರಾಮದ ಹಿರಿಯರಾದ ಪಾಪಣ್ಣ, ಗ್ರಾಪಂ ಮಾಜಿ ಉಪಾಧ್ಯಕ್ಷ ಹೊನ್ನಪ್ಪ, ಮುಖಂಡರಾದ ದೇವಣ್ಣ, ದೊಡ್ಡೇಗೌಡ, ಕೆ.ಜಿ.ಶ್ರೀನಿವಾಸ, ನಾಗರಾಜು, ಉದಯ್, ಕರಿಯಪ್ಪ, ಸಿದ್ದಪ್ಪ, ಉಮಾಶಂಕರ್, ಡಾ. ಭಾನುಪ್ರಕಾಶ್ ತಂದೆ ಜಯರಾಮೇಗೌಡ, ಸುರೇಶ್, ಶೇಖರ್, ಕೀರ್ತಿ, ರಟ್ಟಹಳ್ಳಿ ಶಿವಣ್ಣ, ಮಹಾದೇವ ಇದ್ದರು.