ಪರಿಶುದ್ಧ ಜೀವನಕ್ಕೆ ಸಂಸ್ಕಾರ ಮುಖ್ಯ

21-3-2023 BELUR (2)
Published on

ಬೇಲೂರು: ಪರಿಶುದ್ಧ ಜೀವನಕ್ಕೆ ಸಂಸ್ಕಾರ ಮುಖ್ಯ. ಸದ್ವಿಚಾರ, ಸದಾಚಾರಗಳಿಂದ ಬದುಕು ಸಮೃದ್ಧ. ದೀಪದ ಬೆಳಕು ಎಲ್ಲಿ ಬಿದ್ದರೂ ಮಲಿನವಾಗುವುದಿಲ್ಲ. ಅದರಂತೆ ಮಾನವನ ಬದುಕು ದೀಪದಂತೆ ಪರಿಶುದ್ಧವಾಗಿರಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಬೇಲೂರು ತಾಲೂಕಿನ ಅಂಕಿಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರಸ್ವಾಮಿ ದೇವರ ಮರುಪ್ರತಿಷ್ಠಾಪನೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಧರ್ಮ ಸಂಗಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬೆಟ್ಟ ಎಂದಿಗೂ ನಮ್ಮ ಮುಂದೆ ಬಾಗುವುದಿಲ್ಲ. ಆದರೆ, ಕಷ್ಟಪಟ್ಟು ಏರಿದ ಮೇಲೆ ಅದು ಪಾದದ ಕೆಳಗೆ ಇರುತ್ತದೆ. ಪ್ರಯತ್ನ ಮತ್ತು ಸಾಧನೆಯಿಲ್ಲದೆ ಶ್ರೇಯಸ್ಸು ಸಿಗುವುದಿಲ್ಲ. ಎಲ್ಲಿ ನಿಜವಾದ ಭಕ್ತಿ ಇದೆಯೋ ಅಲ್ಲಿ ದೇವರಿದ್ದಾನೆ. ಎಲ್ಲಿ ನಂಬಿಕೆ ಇದೆಯೋ ಅಲ್ಲಿ ಸಾರ್ಥಕ ಜೀವನವಿದೆ. ಎಲ್ಲಿ ಸಂತೋಷ ಇದೆಯೋ ಅಲ್ಲಿ ಸ್ವರ್ಗವಿದೆ. ದೇವರು, ಧರ್ಮ ಮತ್ತು ಗುರುವಿನಲ್ಲಿ ಅಚಲ ನಂಬಿಕೆ, ವಿಶ್ವಾಸಗಳನ್ನು ಕಳೆದುಕೊಳ್ಳಬಾರದು ಎಂದರು.

ಬದುಕಿನಲ್ಲಿ ಯಶಸ್ಸು ಪಡೆಯಬೇಕಾದರೆ ಶಿಸ್ತು, ಶಾಂತಿ, ಸಹನೆ, ಪರಿಶ್ರಮ ಮತ್ತು ಪರೋಪಕಾರ ಗುಣಗಳನ್ನು ಅಳವಡಿಸಿಕೊಳ್ಳಬೇಕು. ವೀರಶೈವ ಧರ್ಮದಲ್ಲಿ ಅತ್ಯಮೂಲ್ಯವಾದ ವಿಚಾರಧಾರೆಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಅಂಕಿಹಳ್ಳಿ ಶ್ರೀ ಬಸವೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಮಾಡಿ ಇಂದು ಪ್ರತಿಷ್ಠಾಪನೆಗೊಳ್ಳುತ್ತಿರುವುದು ತಮ್ಮೆಲ್ಲರ ದೈವ ಭಕ್ತಿಗೆ ಸಾಕ್ಷಿಯಾಗಿದೆ ಎಂದರು.

ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಧರ್ಮದ ಅರಿವು ಆಚರಣೆ ಮುಖ್ಯ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಮುಂದೆ ಸಾಗಬೇಕೆಂದರೆ ಗುರುಗಳ ಮಾರ್ಗದರ್ಶನ, ದೇವರ ಆಶೀರ್ವಾದದಲ್ಲೇ ಸಾಗಬೇಕು. ಇಲ್ಲದಿದ್ದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಯಸಳೂರು ಚನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ರೇಣುಕ ಮಹಂತ ಶಿವಾಚಾರ್ಯ ಸ್ವಾಮೀಜಿ, ಸಂಕಲಾಪುರ ಮಠದ ಧರ್ಮರಾಜ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಶಿವಗಂಗಾ ಗ್ರಾನೈಟ್ಸ್ ಮಾಲೀಕ, ಕಾಂಗ್ರೆಸ್ ಮುಖಂಡ ರಾಜಶೇಖರ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕೊರಟಕೆರೆ ಪ್ರಕಾಶ್, ಮುಖಂಡ ಸಿದ್ದೇಶ್, ನಾಗೇಂದ್ರ, ಬೆಳೆಗಾರ ಪರಮಶಿವಪ್ಪ, ಎ.ಪಿ. ಪುಟ್ಟಸ್ವಾಮಿ, ಶಿಕ್ಷಕಿ ಹೇಮಲತಾ ಇತರರಿದ್ದರು.

ಸಮಾರಂಭಕ್ಕೂ ಮುನ್ನ ಅಂಕಿಹಳ್ಳಿ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಕುದುರೆ ಸಾರೋಟಿನಲ್ಲಿ ಕುಳ್ಳಿರಿಸಿ, ಡೊಳ್ಳು, ವೀರಗಾಸೆ, ವಾದ್ಯ ಕಲಾತಂಡ ಹಾಗೂ ಕುಂಭ ಹೊತ್ತ ಆರತಿ ಹಿಡಿದ ಸುಮಂಗಲೆಯರು ಮೆರವಣಿಗೆ ಮೂಲಕ ಬರಮಾಡಿಕೊಂಡರು. ಸಮಾರಂಭದ ನಂತರ ನೆರೆದಿದ್ದ ಭಕ್ತರಿಗೆ ಅನ್ನದಾಸೋಹ ಜರುಗಿತು. ಧಾರ್ಮಿಕ ಪೂಜಾ ಕೈಂಕರ್ಯಗಳ ನೇತೃತ್ವವನ್ನು ಬೆಂಗಳೂರಿನ ಚಂದ್ರಶೇಖರ ಶಾಸ್ತ್ರಿ, ಅಂಕಿಹಳ್ಳಿ ತೀರ್ಥೇಶ ಶಾಸ್ತ್ರಿ, ವಿಜಯಕುಮಾರ ಶಾಸ್ತ್ರಿ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net