ಪರಿಶೀಲಿಸಿ ಜಾಬ್ ಕಾರ್ಡ್ ಸಕ್ರಿಯ

11 hulsur 01
Published on

ಹುಲಸೂರು: ಆಧಾರ್ ಲಿಂಕ್ ಹೊಂದಿರದ ಕಾರಣ ನಿಷ್ಕ್ರೀಯಗೊಂಡ ೧೬೦ ಜಾಬ್ ಕಾರ್ಡ್ಗಳನ್ನು ಪರಿಶೀಲಿಸಿ, ಸಕ್ರಿಯಗೊಳಿಸಲಾಗುವುದು ಎಂದು ಸಿಡಿಪಿಒ ಗೌತಮ್ ಶಿಂಧೆ ಹೇಳಿದರು. ಗೋರ್ಟಾ (ಬಿ) ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ೨೦೨೨-೨೩ನೇ ಸಾಲಿನ ನರೇಗಾ ಯೋಜನೆ ಅನುದಾನದ, ೧೫ನೇ ಹಣಕಾಸು ಅನುದಾನದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಮಾತನಾಡಿದರು.

ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ ನಾವದಗಿ ಮಾತನಾಡಿ, ಕೂಲಿ ಮಾಡುವ ಕೈಗಳಿಗೆ ಕೆಲಸ ಹಾಗೂ ಆಸ್ತಿಗಳ ಸೃಜನೆ ನರೇಗಾ ಯೋಜನೆ ಉದ್ದೇಶವಾಗಿದೆ. ಜಾಬ್ ಕಾರ್ಡ್ ಹೊಂದಿದ ಕುಟುಂಬಕ್ಕೆ ಯೋಜನೆಯಡಿ ವರ್ಷಕ್ಕೆ ನೂರು ದಿನ ಕೂಲಿ ಕೆಲಸ ನೀಡಲಾಗುವುದು. ತಾಂತ್ರಿಕ ಕಾರಣದಿಂದ ಡಿಲಿಟ್ ಆದ ಕೂಲಿಕಾರರ ಜಾಬ್ ಕಾರ್ಡ್ಗಳನ್ನು ಆರಂಭಿಸಿ, ಕೂಲಿ ಕೆಲಸ ನೀಡಲು ಪ್ರಯತ್ನಿಸುವೆ ಎಂದರು.

ಸಾಮಾಜಿಕ ಲೆಕ್ಕ ಪರಿಶೋಧನೆ ತಾಲೂಕು ವ್ಯವಸ್ಥಾಪಕ ಸಂಜುಕುಮಾರ ನಂದಿ ಮಾತನಾಡಿ, ಗೋರ್ಟಾ (ಬಿ) ಗ್ರಾಪಂನಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ನರೇಗಾ ಯೋಜನೆಯಡಿ ೧.೯೮ ಕೋಟಿ ರೂ. ಅನುದಾನ ಖರ್ಚಾಗಿದೆ. ಇದರಡಿ ವಿವಿಧ ಸಾಮುದಾಯಿಕ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ನಿರ್ಮಿಸಲಾಗಿದೆ. ೧೫ನೇ ಹಣಕಾಸು ಆಯೋಗದ ಅನುದಾನದಡಿ ೩೩ ಲಕ್ಷ ರೂ. ಖರ್ಚಾಗಿದೆ ಎಂದರು.

ಕೆಲ ಕಾಮಗಾರಿಗೆ ಗ್ರಾಮಸ್ಥರಿಂದ ಆಕ್ಷೇಪಣೆ ವ್ಯಕ್ತವಾದವು. ಅಧಿಕಾರಿಗಳು ಆಕ್ಷೇಪಣೆಗಳಿಗೆ ಸ್ಪಷ್ಟೀಕರಣ ನೀಡಿದರು. ಗ್ರಾಪಂ ಅಧ್ಯಕ್ಷೆ ಸರಸ್ವತಿ ಪಟ್ನೆ, ಪಿಡಿಒ ಸಿದ್ದಲಿಂಗ ಪದ್ಮಾ, ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ ನಾವದಗಿ, ಐಇಸಿ ಸಂಯೋಜಕ ಗಣಪತಿ ಹಾರಕೂಡೆ, ಜೆಇ ಶೇಖರ, ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲೂಕು ತಂಡ, ಗ್ರಾಪಂ ಸಿಬ್ಬಂದಿ, ಗ್ರಾಮದ ಪ್ರಮುಖರು ಹಾಗೂ ನರೇಗಾ ಕೂಲಿಕಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net